ಚೆನ್ನೈ(ತಮಿಳುನಾಡು) : ಏಷ್ಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ 4-0 ಗೋಲುಗಳಿಂದ ಬಗ್ಗುಬಡಿದು ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿತು. ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ನೆರೆರಾಷ್ಟ್ರ ಮುಗ್ಗರಿಸಿ ಟೂರ್ನಿಯಿಂದ ಹೊರಬಿತ್ತು. ಈ ಮೂಲಕ ಪಾಕ್ ವಿರುದ್ಧದ ಜೈತ್ರಯಾತ್ರೆಯನ್ನು ಭಾರತ ಮುಂದುವರಿಸಿತು.
ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಸೆಣಸಾಟದಲ್ಲಿ ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು(15, 23 ನೇ ನಿಮಿಷ) ಬಾರಿಸಿ ಮುನ್ನಡೆ ತಂದರೆ, ಜುಗರಾಜ್ ಸಿಂಗ್ (36ನೇ ನಿ) ಮತ್ತು ಆಕಾಶದೀಪ್ ಸಿಂಗ್ (55ನೇ ನಿ) ತಲಾ ಒಂದು ಗೋಲು ಗಳಿಸಿದರು. ಪೆನಾಲ್ಟಿ ಕಾರ್ನರ್‌ಗಳಿಂದ ಮೂರು ಗೋಲುಗಳು ಬಂದರೆ, ಆಕಾಶದೀಪ್ ಫೀಲ್ಡ್ ನೇರ ಗೋಲು ಪಡೆದರು.
ಪ್ರಥಮಾರ್ಧದಲ್ಲಿ 2 ಗೋಲು: ಪಂದ್ಯದ ಆರಂಭದಿಂದಲೂ ಪಾಕ್ ಆಟಗಾರರ ಮೇಲೆ ದಂಡೆತ್ತಿ ಹೋದ ಭಾರತೀಯರು ಸಂಪೂರ್ಣ ಪ್ರಾಬಲ್ಯ ಮೆರೆದರು. ಈ ಪಂದ್ಯಕ್ಕೂ ಮುನ್ನ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದ ಆತಿಥೇಯ ತಂಡ ಹೆಚ್ಚು ಆತ್ಮವಿಶ್ವಾಸದಿಂದ ಆಡಿತು. 15 ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಇದನ್ನು ನಾಯಕ ಹರ್ಮನ್‌ಪ್ರೀತ್ ವ್ಯರ್ಥ ಮಾಡದೇ ಬಲವಾದ ಲೋ ಫ್ಲಿಕ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳಿದರು. 8 ನಿಮಿಷಗಳ ಅಂತರದಲ್ಲಿ ಅಂದರೆ 23ನೇ ನಿಮಿಷದಲ್ಲಿ ಭಾರತಕ್ಕೆ ಎರಡನೇ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಹರ್ಮನ್‌ಪ್ರೀತ್ ಈ ಬಾರಿ ಡ್ರ್ಯಾಗ್ ಫ್ಲಿಕ್ ಮಾಡುವ ಮೂಲಕ ಗೋಲು ಗಳಿಸಿ 2-0 ಮುನ್ನಡೆ ತಂದರು.
ಇದಾದ ನಂತರವೂ ಭಾರತ ಸರಣಿ ದಾಳಿ ನಡೆಸುವ ಮೂಲಕ ಪಾಕಿಸ್ತಾನದ ರಕ್ಷಣಾ ಪಡೆಯ ಮೇಲೆ ಒತ್ತಡ ಹೇರುತ್ತಲೇ ಹೋಯಿತು. ಇದರ ಪರಿಣಾಮ 30ನೇ ನಿಮಿಷದಲ್ಲಿ ಸತತ ಎರಡು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಆದರೆ, ಆ ಎರಡೂ ಅವಕಾಶಗಳಲ್ಲಿ ಹರ್ಮನ್‌ಪ್ರೀತ್ ವಿಫಲರಾಗಿದ್ದರಿಂದ ಗೋಲು ಬರಲಿಲ್ಲ.
ದ್ವಿತೀಯಾರ್ಧದಲ್ಲಿ 2 ಗೋಲು: ವಿರಾಮದ ವೇಳೆಗೆ 2-0 ಮುನ್ನಡೆಯಲ್ಲಿದ್ದ ಭಾರತ, ದ್ವಿತೀಯಾರ್ಧದ ಆರನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ 3-0 ಮುನ್ನಡೆ ಸಾಧಿಸಿತು. ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶ ಈ ಬಾರಿ ಜುಗರಾಜ್ ಸಿಂಗ್ ಪಾಲಾಯಿತು. ಪಾಕ್ ತಂಡ ಗೋಲು ತಡೆಯುವ ಯತ್ನದಲ್ಲಿ ಹಲವಾರು ಬಾರಿ ತಪ್ಪು ಎಸಗಿತು. 43ನೇ ನಿಮಿಷದಲ್ಲಿ ಪಾಕಿಸ್ತಾನಕ್ಕೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿರೂ ಅದನ್ನು ವ್ಯರ್ಥ ಮಾಡಿಕೊಂಡಿತು. 55ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ನೀಡಿದ ಸ್ಟ್ರೈಕ್ ಅನ್ನು ಆಕಾಶದೀಪ್ ಸಿಂಗ್ ಸಮರ್ಥವಾಗಿ ಬಳಸಿಕೊಂಡು ಗೋಲು ಗಳಿಸಿದರು. ಇದರಿಂದ ಭಾರತ ಕೊನೆಯಲ್ಲಿ 4-0 ಅಂತರದಿಂದ ಜಯ ದಾಖಲಿಸಿತು.
2016 ರಿಂದ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಕಾಯ್ದುಕೊಂಡಿರುವ ಭಾರತ ಸತತ 13ನೇ ಗೆಲುವು ಸಾಧಿಸಿತು. ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ತಲುಪಿತು. ಹರ್ಮನ್‌ಪ್ರೀತ್ ಪಡೆ ಆಡಿದ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು ಒಂದು ಡ್ರಾ ಸಾಧಿಸಿ 13 ಅಂಕ ಗಳಿಸಿದೆ. ಶುಕ್ರವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ. ಇನ್ನೊಂದು ಸೆಮಿಯಲ್ಲಿ ಮಲೇಷ್ಯಾ ಮತ್ತು ಕೊರಿಯಾ ಮುಖಾಮುಖಿಯಾಗಲಿವೆ.
ಇದನ್ನೂ ಓದಿ: Hockey: ಏಷ್ಯಾಡ್ ಹಾಕಿಯಲ್ಲಿ ಇಂದು ಭಾರತ-ಪಾಕಿಸ್ತಾನ ಪೈಪೋಟಿ; ನೆರೆ ದೇಶಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ!