ದೋಹಾ(ಕತಾರ್): ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡಿ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಸದೆಬಡಿಯುವ ಮೂಲಕ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆಯಿತು. ಸೋಮವಾರ ದೋಹಾದ 974 ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ನ 16 ರ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ಅಸಾಧಾರಣ ಆಟ ಪ್ರದರ್ಶಿಸಿತು.
ಮೊದಲಾರ್ಧದ ಕೇವಲ 36 ನಿಮಿಷದಲ್ಲಿ 4 ಗೋಲುಗಳನ್ನು ಗಳಿಸಿದ ಬ್ರೆಜಿಲ್ ಪಂದ್ಯವನ್ನು ಸಂಪೂರ್ಣವಾಗಿ ಹಿಡಿತಕ್ಕೆ ಪಡೆಯಿತು. ವಿನಿಶಿಯಸ್ ಜೂನಿಯರ್(7ನೇ ನಿಮಿಷ), ನೇಮರ್(13ನೇ ನಿಮಿಷ), ರಿಚಾರ್ಲಿಸನ್ (29ನೇ ನಿಮಿಷ)ಮತ್ತು ಪ್ಯಾಕ್ವೆಟಾರ (36ನೇ ನಿಮಿಷ)ಅಮೋಘ ಗೋಲುಗಳ ನೆರವಿನಿಂದ ಬ್ರೆಜಿಲ್ ನಾಲ್ಕರಘಟ್ಟದ ಪಂದ್ಯವನ್ನು ಖಾತ್ರಿಪಡಿಸಿತು.
ಕಾಲಿಗೆ ಗಾಯ ಮಾಡಿಕೊಂಡು 2 ಪಂದ್ಯಗಳಿಂದ ತಪ್ಪಿಸಿಕೊಂಡಿದ್ದ ಖ್ಯಾತ ಆಟಗಾರ ನೇಮರ್ ಜೂನಿಯರ್ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿಕೊಂಡು ಬ್ರೆಜಿಲ್ ಪರವಾಗಿ 76 ನೇ ಗೋಲು ಬಾರಿಸಿದರು. ತಂಡದ ದಿಗ್ಗಜ ಫುಟ್ಬಾಲಿಗ ಪೀಲೆ ಗಳಿಸಿದ 77 ಗೋಲುಗಳ ದಾಖಲೆಯನ್ನು ಮುರಿಯಲು ನೇಮರ್ಗೆ ಒಂದು ಗೋಲಿನ ಅವಶ್ಯಕತೆ ಇದೆ.
ಪೈಕ್ ಸೆಯುಂಗ್ ಹೊ 76 ನೇ ನಿಮಿಷದಲ್ಲಿ ಗಳಿಸಿದ ಒಂದು ಗೋಲು ದಕ್ಷಿಣ ಕೊರಿಯಾದ ಖಾತೆ ಸೇರಿತು. ಇದನ್ನು ಬಿಟ್ಟರೆ, ಇನ್ಯಾವುದೇ ಹಂತದಲ್ಲಿ ಬ್ರೆಜಿಲ್ ಗೋಲ್ ಕೀಪರ್ ಕೊರಿಯಾ ಆಟಗಾರರಿಗೆ ಗೋಲು ಬಾರಿಸುವ ಅವಕಾಶವನ್ನೇ ನೀಡಲಿಲ್ಲ.
40 ಸಾವಿರ ಜನರಿದ್ದ ಸ್ಟೇಡಿಯಂನಲ್ಲಿ ಹಳದಿ ಬಟ್ಟೆಯ ಬ್ರೆಜಿಲ್ ಅಭಿಮಾನಿಗಳ ಕೇಕೆ ಮುಗಿಲು ಮುಟ್ಟಿತು. ದಕ್ಷಿಣ ಕೊರಿಯಾ ವಿಶ್ವಕಪ್ನಿಂದ ಹೊರಬಿದ್ದ ಕೊನೆಯ ಏಷ್ಯಾ ತಂಡವಾಯಿತು. ಇದರಿಂದ ಅಭಿಮಾನಿಗಳು ಕಣ್ಣೀರು ಹಾಕುತ್ತ ಕ್ರೀಡಾಂಗಣವನ್ನು ತೊರೆದರು. ಕ್ವಾರ್ಟರ್ಫೈನಲ್ನಲ್ಲಿ ಬ್ರೆಜಿಲ್ ಕ್ರೊಯೇಷಿಯಾ ವಿರುದ್ಧ ಕಾದಾಡಲಿದೆ.
ಓದಿ: ಫಿಫಾ ವಿಶ್ವಕಪ್ 2022: ಗೊಲ್ಡನ್ ಬೂಟ್ ರೇಸ್ನಲ್ಲಿ ಬಪ್ಪೆ ಮುಂಚೂಣಿ