ಕೊಲ್ಲಂ(ಕೇರಳ): ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ವಿಶ್ವಕ್ಕೇ ಜ್ವರವೇರಿಸಿದೆ. ಅತಿ ಶ್ರೀಮಂತ ಕ್ರೀಡೆ ಎಂದು ಗುರುತಿಸಿಕೊಂಡಿರುವ ಫುಟ್ಬಾಲ್ ಭಾರತದಲ್ಲಿ ಅಷ್ಟೇನೂ ಪ್ರಚಲಿತದಲ್ಲಿಲ್ಲ. ಆದರೆ, ಕೆಲ ರಾಜ್ಯಗಳಲ್ಲಿ ಕಾಲ್ಚೆಂಡಿನ ಆಟಕ್ಕೆ ಅಭಿಮಾನಿಗಳ ದಂಡೇ ಇದೆ. ಅದರಲ್ಲೂ ಕೇರಳದಲ್ಲಿ ಫುಟ್ಬಾಲ್ ಹುಚ್ಚು ತುಸು ಹೆಚ್ಚು.
ವಿಶ್ವದ ಅಗ್ರಮಾನ್ಯ ತಂಡಗಳಾದ ಅರ್ಜೆಂಟೀನಾ ಮತ್ತು ಬ್ರೆಜಿಲ್ಗೆ ಇಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ವಿಶ್ವದ ಶ್ರೇಷ್ಠ ಫುಟ್ಬಾಲಿಗರಾದ ಅರ್ಜೆಂಟೀನಾ ತಂಡದ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ನೈಮರ್ ಅವರ ಕಟೌಟ್ಗಳನ್ನು ಇಲ್ಲಿನ ನದಿ ಪಾತ್ರದಲ್ಲಿ ನಿಲ್ಲಿಸಲಾಗಿದೆ.
ಇಂದು ಕೊಲ್ಲಂ ಜಿಲ್ಲೆಯ ಸಕ್ತಿಕುಲಂಗರ್ ಎಂಬಲ್ಲಿ ಲಿಯೋನೆಲ್ ಮೆಸ್ಸಿ ಕಟೌಟ್ ಮೆರವಣಿಗೆ ನಡೆಸಿ ಅಲ್ಲಿನ ನದಿಯಲ್ಲಿ ನಿಲ್ಲಿಸಲಾಗಿದೆ. ಮೆರವಣಿಗೆಯ ವೇಳೆ ಅರ್ಜೆಂಟೀನಾ ತಂಡ ಈ ಬಾರಿಯ ವಿಶ್ವಕಪ್ ಎತ್ತಿ ಹಿಡಿಯಲಿದೆ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.
ಇದು ಅದೇ ಗ್ರಾಮದ ಬ್ರೆಜಿಲ್ ಅಭಿಮಾನಿಗಳನ್ನು ಕೆರಳಿಸಿದೆ. ಬ್ರೆಜಿಲ್ ಗೆಲ್ಲಲಿದೆ ಎಂದು ತಂಡದ ಅಭಿಮಾನಿಗಳು ಮರುಘೋಷಣೆ ಕೂಗಿದ್ದಾರೆ. ಇದು ಎರಡು ತಂಡದ ಅಭಿಮಾನಿಗಳ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ.
ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ: ವಿಶ್ವಕಪ್ ಗೆಲುವಿನ ಘೋಷಣೆಯಿಂದಾಗಿ ಹೊತ್ತಿಕೊಂಡ ಕಿಡಿ, ಭಾರೀ ಹೊಡೆದಾಟಕ್ಕೆ ನಾಂದಿ ಹಾಡಿದೆ. ಕಲ್ಲು, ಕಬ್ಬಿಣದ ರಾಡುಗಳು, ದೊಣ್ಣೆಗಳು, ಪೈಪ್ಗಳಿಂದ ಇತ್ತಂಡಗಳ ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹೊಡೆದಾಟ ತಡೆದಿದ್ದಾರೆ. ಬಳಿಕ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಓದಿ: 64 ವರ್ಷಗಳ ಬಳಿಕ ಕಣಕ್ಕಿಳಿದು ಜಿದ್ದಾಜಿದ್ದಿನ ಹೋರಾಟ ನಡೆಸಿದ ವೇಲ್ಸ್; ಪಂದ್ಯ ಡ್ರಾ