ಲಂಡನ್: ಟೆನಿಸ್ ದಂತಕತೆಗಳಾದ ರೋಜರ್ ಫೆಡೆರರ್ ಮತ್ತು ರಾಫೆಲ್ ನಡಾಲ್ ಮುಂಬರುವ ಲೇವರ್ ಕಪ್ನ ಡಬಲ್ಸ್ ವಿಭಾಗದಲ್ಲಿ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿಯಲ್ಲಿ ಯುರೋಪ್ ತಂಡ ವಿಶ್ವತಂಡದ ವಿರುದ್ಧ ಕಣ್ಣಿಳಿಯಲಿದೆ.
ಮೊಣಕಾಲಿನ ಗಾಯದ ಕಾರಣ ರೋಜರ್ ಫೆಡರರ್ ಕಳೆದ ವರ್ಷ ಜುಲೈನಿಂದ ಸ್ಪರ್ಧಾತ್ಮಕ ಟೆನಿಸ್ನಿಂದ ದೂರ ಉಳಿದಿದ್ದಾರೆ. ಇತ್ತ ನಡಾಲ್ ಕಳೆದ ತಿಂಗಳಷ್ಟೇ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗುವ ಮೂಲಕ 21 ಗ್ರ್ಯಾಂಡ್ಸ್ಲಾಮ್ ಗೆದ್ದ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ವಿಶ್ವ ಶ್ರೇಷ್ಠ ಆಟಗಾರರಾಗಿರು ಇವರಿಬ್ಬರು ಸೆಪ್ಟೆಂಬರ್ 23-25ರವರೆಗೆ ಲಂಡನ್ನಲ್ಲಿ ನಡೆಯಲಿರುವ ಲೇವರ್ ಕಪ್ನಲ್ಲಿ ಟೀಮ್ ಯುರೋಪ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
" ಈ ವರ್ಷದ ಕೊನೆಯಲ್ಲಿ ಸ್ಪರ್ಧೆಗೆ ಮರಳಲು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಮತ್ತು ಲೇವರ್ ಕಪ್ ನನ್ನ ಯೋಜನೆಯ ಭಾಗವಾಗಿದೆ " ಎಂದು ಫೆಡರರ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕಳೆದ ವರ್ಷ ಲೇವರ್ ಕಪ್ನಲ್ಲಿ ಮತ್ತೆ ಒಂದಾಗಿ ಡಬಲ್ಸ್ನಲ್ಲಿ ಕಣಕ್ಕಿಳಿಯೋಣ ಎಂದು ನನಗೆ ಸಂದೇಶ ಕಳುಹಿಸಿದ್ದರು ಎಂದು ತಿಳಿಸಿದ್ದಾರೆ. 2017ರ ಲೇವರ್ ಕಪ್ನಲ್ಲಿ ಈ ಇಬ್ಬರು ಒಂದಾಗಿ ಆಡಿದ್ದರು.
" ಒಂದು ವೇಳೆ ನಾವು ಡಬಲ್ಸ್ ಜೋಡಿಯಾಗಿ ಮತ್ತೊಮ್ಮೆ ಅಂಕಣವನ್ನು ಹಂಚಿಕೊಳ್ಳಲು ಸಾಧ್ಯವಾದರೆ, ಇದು ನಮ್ಮ ವೃತ್ತಿಜೀವನದ ಈ ಹಂತದಲ್ಲಿ ನಿಜವಾಗಿಯೂ ವಿಶೇಷ ಅನುಭವವಾಗಲಿದೆ" ಎಂದು 21 ಗ್ರ್ಯಾಂಡ್ಸ್ಲಾಮ್ ವಿಜೇತ ನಡಾಲ್ ಹೇಳಿದರು.
2016ರಲ್ಲಿ ಲೇವರ್ ಕಪ್ ಸ್ಥಾಪಿಸಲಾಗಿದ್ದು, ಯುರೋಪ್ ರಾಷ್ಟ್ರಗಳ ಒಂದು ತಂಡ ಮತ್ತು ವಿಶ್ವದ ಎಲ್ಲಾ ದೇಶಗಳ ಸ್ಟಾರ್ ಆಟಗಾರರನ್ನು ಒಳಗೊಂಡ ಮತ್ತೊಂದು ಮುಖಾಮುಖಿಯಾಗಲಿವೆ. 2021ರ ವರೆಗೆ ಇದು 4 ಆವೃತ್ತಿ ಮುಗಿದಿದ್ದು, ಫೆಡರರ್ ಅಥವಾ ನಡಾಲ್ ಇಬ್ಬರಲ್ಲಿ ಒಬ್ಬರು ಟೂರ್ನಮೆಂಟ್ನ ಭಾಗವಾಗಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ; ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್ ಆಯೋಜನೆ ಖಚಿತಪಡಿಸಿದ ಗಂಗೂಲಿ