ಸಹಜಸಿದ್ಧವಾದ ಪ್ರವೃತ್ತಿಯೊಂದಿಗೆ ಪ್ರಾಮಾಣಿಕವಾಗಿ ಸ್ಪರ್ಧಿಸುವುದು, ಸೋತರೂ ಚೆನ್ನಾಗಿ ಆಡಿದ್ದೇವೆ ಎಂದೆನ್ನಿಸಿಕೊಳ್ಳುವುದೇ ಕಲುಷಿತವಿಲ್ಲದ ಕ್ರೀಡಾ ಪ್ರತಿಭೆಯ ಮೂಲ. ಸೋಲನ್ನು ಮನಸ್ಫೂರ್ತಿಯಾಗಿ ಸ್ವೀಕರಿಸುವುದೇ ಶ್ರೇಷ್ಠ ಕ್ರೀಡಾಕಾರನ ಗುಣ. ಆದರೆ, ಈ ಲಕ್ಷಣಗಳನ್ನು ತೊರೆದು ಎದುರಾಳಿಯ ಮೇಲೆ ಅನೈತಿಕವಾಗಿ ಮುನ್ನಡೆ ಸಾಧಿಸಲು ಹಾಗೂ ಆಟದಲ್ಲಿ ಅಸಾಧಾರಣ ಪ್ರದರ್ಶನಕ್ಕಾಗಿ ನಿಷೇಧಿತ ಮಾದಕ ವಸ್ತುಗಳನ್ನು ಬಳಸುವುದು, ಹಲವು ದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದುರದೃಷ್ಟವೆಂಬಂತೆ, ಅಂತಹ ಪ್ರಕರಣಗಳು ನಮ್ಮ ದೇಶದಲ್ಲೂ ಹೆಚ್ಚಾಗಿ ಕಂಡು ಬರುತ್ತಿವೆ.
ಎರಡೂವರೆ ವರ್ಷಗಳಿಂದ ಡೋಪಿಂಗ್ ಆರೋಪವನ್ನು ಎದುರಿಸುತ್ತಿರುವ ಸಂಚಿತಾ ಚಾನು ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂಬ ಅಂತಾರಾಷ್ಟ್ರೀಯ ವೇಯ್ಟ್‌ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯುಎಫ್) ಹೇಳಿಕೆಯಿಂದ ನಿಟ್ಟುಸಿರು ಬಿಡುವಂತಾಗಿದೆಯಾದ್ರೂ, ಮತ್ತೊಂದೆಡೆ ದೋಹಾ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 800 ಮೀಟರ್ ಚಿನ್ನದ ಪದಕ ಗೆದ್ದ ಗೋಮತಿ ಮೇಲೆ ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿ (ನಾಡಾ) ನಾಲ್ಕು ವರ್ಷಗಳ ನಿಷೇಧ ಹೇರಿರುವುದು ದುಃಖಕರ ಸಂಗತಿ. ಇನ್ನೊಂದೆಡೆ ಅಮೃತಪಾಲ್ ಸಿಂಗ್ (ಬ್ಯಾಸ್ಕೆಟ್‌ಬಾಲ್), ನೀರಜ್ ಫೋಗಟ್ (ಬಾಕ್ಸಿಂಗ್) ಮತ್ತು ಶ್ರವಣ್ ಕುಮಾರ್ (ಶೂಟಿಂಗ್) ಇವರ ಮೇಲೆ ನಾಡಾ (ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ) ನಿಷೇಧ ಹೇರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಸಮಕಾಲೀನ ವಿಶ್ವ ಇತಿಹಾಸದಲ್ಲಿ ಪದಕಗಳಿಗಾಗಿ ನೈತಿಕ ಕುಸಿತ ಕಂಡ ದೇಶ ಯಾವುದು ಎಂದರೆ ನಮಗೆ ಮೊದಲು ನೆನಪಾಗುವುದು ರಷ್ಯಾ. ಈ ದೇಶದ ತರಬೇತುದಾರರು, ವೈದ್ಯರು, ಅಧಿಕಾರಿಗಳು, ಕ್ರೀಡಾಪಟುಗಳು ಎಲ್ಲರಿಗೂ ತಿಳಿದೇ ಡೋಪಿಂಗ್ ವ್ಯವಸ್ಥೆ ಇಲ್ಲಿ ಯಥೇಚ್ಛವಾಗಿ ಬೆಳೆಯಿತು. ಹಾಗಾಗಿಯೇ ಟೊಕಿಯೊ ಒಲಿಂಪಿಕ್ಸ್ ಮತ್ತು ಕತಾರ್ ಫುಟ್ಬಾಲ್ ವಿಶ್ವಕಪ್ ಸೇರಿ ನಾಲ್ಕು ವರ್ಷಗಳಿಂದ ಯಾವುದೇ ಪ್ರಮುಖ ಕ್ರೀಡಾಕೂಟದಲ್ಲಿ ಮಾಸ್ಕೋ ಭಾಗವಹಿಸುವಂತಿಲ್ಲ ಎಂದು ನಾಡಾ ಕಠಿಣ ಶಿಕ್ಷೆ ವಿಧಿಸಿದೆ.
ಅಲ್ಲಿನ ಸರ್ಕಾರವೇ ಇದನ್ನೆಲ್ಲಾ ಉತ್ತೇಜಿಸುವ ಮೂಲಕ ತಮ್ಮ ದೇಶಕ್ಕೆ ಅಪ್ರತಿಷ್ಟತೆ ತಂದುಕೊಂಡಿದೆ. ಹಾಗೇ ನಮ್ಮಲ್ಲಿನ ಕೆಲವರ ತಪ್ಪುಗಳಿಂದ ಭಾರತದ ಮಾನ ಹಾನಿಯಾಗುತ್ತಿದೆ. ಡೋಪಿಂಗ್‌ನ ನಿರ್ಮೂಲನೆ ಮಾಡಲು ಜರ್ಮನಿ, ಇಟಲಿ, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿವೆ. ಈ ದೇಶಗಳು ಡೋಪಿಂಗ್ ನಿರ್ಮೂಲನೆಗೆ ಕಠಿಣ ಕ್ರಮಗಳನ್ನು ಕೈಗೊಂಡಿದ್ರೆ, ನಮ್ಮ ದೇಶದಲ್ಲಿ ಡೋಪಿಂಗ್ ಬಲೆಗೆ ಬೀಳದಂತೆ ಕ್ರೀಡಾಪಟುಗಳಿಗೆ ಮತ್ತು ತರಬೇತುದಾರರಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಮೇರಿ ಕೋಮ್ ದೀರ್ಘಕಾಲದಿಂದ ಮನವಿ ಮಾಡುತ್ತಿದ್ದಾರೆ. ಆದರೆ, ಕ್ರೀಡಾ ಸಚಿವಾಲಯ ಮಾತ್ರ ಇದಕ್ಕೆ ಕಿವಿಗೊಡಿತ್ತಿಲ್ಲ.
ಕೋವಿಡ್ನಿಂದಾಗಿ ಡೋಪಿಂಗ್ ಪರೀಕ್ಷೆ ಹಿಂದೆ ಬಿದ್ದಿದೆ ಎಂದ ನಾಡ, ಇನ್ಮುಂದೆ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಮನ್ನಡೆಯಲಿದ್ದೇವೆ ಎಂದು ಹೇಳಿದೆ. ಯಾವುದೇ ಪರೀಕ್ಷೆಯಲ್ಲಾಗಲಿ ಕ್ರೀಡಾಪಟುಗಳು ಗೆದ್ದು ಬರುವಂತೆ ಜಾಗೃತಿ ಮೂಡಿಸಿ, ಯಾವುದೇ ದೇಶ ವಿವಾದಗಳ ಸುಳಿಗೆ ಸಿಲುಕದಂತೆ ನಾಡ ಇನ್ನಷ್ಟು ಕಾರ್ಯ ಕ್ಷಮತೆಯನ್ನು ತೋರಬೇಕಿದೆ.