ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಉಳಿಯುವುದರ ಬಗ್ಗೆ ಅನಿಶ್ಚಿತತೆ ಹೊಂದಿರುವ ಸರ್ಬಿಯಾದ ನೊವಾಕ್ ಜೋಕೊವಿಕ್ ಆಸ್ಟ್ರೇಲಿಯಾ ಓಪನ್ ಆಯೋಜಕರು ಬಿಡುಗಡೆ ಮಾಡಿರುವ ಟೂರ್ನಿಯ ಪುರುಷರ ವಿಭಾಗದ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ನಿರೀಕ್ಷೆಯಂತೆ ತವರಿನ ಪ್ರತಿಭೆ ಹಾಗೂ ವಿಶ್ವದ ನಂಬರ್ ಒನ್ ಆಶ್ ಬಾರ್ಟಿ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಮಂಗಳವಾರ ಟೂರ್ನಿಯ ಡ್ರಾ ಬಿಡುಗಡೆ ಮಾಡಿದ್ದು, ಹಾಲಿ ಚಾಂಪಿಯನ್ ನವೋಮಿ ಒಸಾಕ 13ನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿಶ್ವದ ನಂಬರ್ 1 ಆಗಿರುವ ನೊವಾಕ್ ಜೋಕೊವಿಕ್ ಆಸ್ಟ್ರೇಲಿಯಾ ಓಪನ್ನಲ್ಲಿ ಪಾಲ್ಗೊಳ್ಳುವುದಕ್ಕೆ ಕೋರ್ಟ್ನಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಕೋವಿಡ್-19 ಲಸಿಕೆ ತೆಗೆದುಕೊಳ್ಳದ ಕಾರಣ ಅವರು ಈಗಲೂ ಗಡಿಪಾರಾಗುವ ಭೀತಿಯಲ್ಲಿದ್ದಾರೆ.
ಜೋಕೊವಿಕ್ 20 ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಜೊತೆಗೆ ಹೆಚ್ಚು ಗ್ರ್ಯಾಂಡ್ಸ್ಲಾಮ್ ಗೆದ್ದ ವಿಶ್ವದಾಖಲೆ ಹಂಚಿಕೊಂಡಿದ್ದಾರೆ. ಈ ವರ್ಷ ಮೆಲ್ಬೋರ್ನ್ನಲ್ಲಿ ಪಂದ್ಯಾವಳಿಯನ್ನು ಗೆದ್ದರೆ ಅವರ ಪಾಲಿಗೆ 10ನೇ ಆಸ್ಟ್ರೇಲಿಯಾ ಓಪನ್ ಹಾಗೂ ವಿಶ್ವದಾಖಲೆಯ 21ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಯಾಗಲಿದೆ.
ಸ್ವಿಸ್ ತಾರೆ ಫೆಡರರ್ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಆಸ್ಟ್ರೇಲಿಯಾ ಓಪನ್ನಿಂದ ಹಿಂದೆ ಸರಿದಿದ್ದಾರೆ. ಯುಎಸ್ ಓಪನ್ ಚಾಂಪಿಯನ್ ಡ್ಯಾನಿಯಲ್ ಮಡ್ವೆಡೆವ್ 2ನೇ ಶ್ರೇಯಾಂಕ ಪಡೆದಿದ್ದರೆ, ಅಲೆಕ್ಸಾಂಡರ್ ಜ್ವರೆವ್, ಸ್ಟೆಫಾನೋಸ್ ಸಿಟ್ಸಿಪಾಸ್ ಮತ್ತು ಆ್ಯಂಡ್ರೆ ರುಬ್ಲೆವ್ ಕ್ರಮವಾಗಿ 2,3,4 ಮತ್ತು 5ನೇ ಸ್ಥಾನ ಪಡೆದಿದ್ದಾರೆ. ನಡಾಲ್ 6ನೇ ಶ್ರೇಯಾಂಕ ಪಡೆದಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಅರಿನಾ ಸಬಲೆಂಕಾ , ಗ್ಯಾರ್ಬಿನ್ ಮುಗುರುಜಾ, ಬಾರ್ಬೊರಾ ಕ್ರಜಿಕೋವಾ ಮತ್ತು ಮರಿಯಾ ಸಕ್ಕರಿ ಮೊದಲ 5 ಶ್ರೇಯಾಂಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಜೊಕೊವಿಕ್ ಗಡಿಪಾರು, ವೀಸಾ ರದ್ದು ತೀರ್ಪು: ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಗೆದ್ದ ವಿಶ್ವ ನಂಬರ್ 1 ಟೆನಿಸ್ ಆಟಗಾರ