ಈ ಪೀಳಿಗೆಯ ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ ವಿಶ್ವಕಪ್ ಗೆಲ್ಲುವ ಕನಸು ಬಹುತೇಕ ಕಮರಿದೆ. ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಮೊರಾಕ್ಕೊ ವಿರುದ್ಧ ಸೋಲನುಭವಿಸುವ ಮೂಲಕ ಅಭಿಯಾನ ಮುಗಿಸಿತು. ಇದು ರೊನಾಲ್ಡೊರ ಕನಸನ್ನು ನುಚ್ಚುನೂರು ಮಾಡಿತು.
ಪಂದ್ಯ ಸೋತ ಬಳಿಕ ಮೈದಾನದಲ್ಲೇ ಕುಸಿದು ಬಿದ್ದ ರೊನಾಲ್ಡೊ ಕನಸಿಗೆ ಕೊಳ್ಳಿ ಬಿದ್ದ ಕ್ಷಣವನ್ನು ಸಹಿಸಲಾಗದೇ ಕಣ್ಣೀರಿಟ್ಟರು. 5 ವಿಶ್ವಕಪ್ಗಳಲ್ಲಿ ಪೋರ್ಚುಗಲ್ ತಂಡವನ್ನು ಪ್ರತಿನಿಧಿಸಿರುವ ಶ್ರೇಷ್ಠ ಫುಟ್ಬಾಲಿಗ 8 ಗೋಲು ಬಾರಿಸಿದ್ದಾರೆ. ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿದ್ದರೂ ಒಂದೇ ಒಂದು ವಿಶ್ವಕಪ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಸೋಲಿನ ಬಳಿಕ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಉದ್ದನೆಯ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ರೊನಾಲ್ಡೊ, 'ವಿಶ್ವಕಪ್ ಕನಸು ಕಮರಿತು' ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ಮುಂದಿನ ವಿಶ್ವಕಪ್ ಹೊತ್ತಿಗಾಗಲೇ ನಿವೃತ್ತಿ ಹೊಂದುವುದಾಗಿ ಸೂಚನೆ ನೀಡಿದ್ದಾರೆ.
ರೊನಾಲ್ಡೊ ಪೋಸ್ಟ್ನಲ್ಲೇನಿದೆ?: 'ಪೋರ್ಚುಗಲ್ಗಾಗಿ ವಿಶ್ವಕಪ್ ಗೆಲ್ಲುವುದು ನನ್ನ ವೃತ್ತಿ ಬದುಕಿನ ಬಹುದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಕನಸಾಗಿತ್ತು. ಪೋರ್ಚುಗಲ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಆದರೆ, ಫುಟ್ಬಾಲ್ ಕ್ರೀಡೆಯ ಅತ್ಯುನ್ನತ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲನಾಗಿದ್ದೇನೆ. 16 ವರ್ಷಗಳಿಂದ ಆ ಒಂದು ಕನಸಿಗಾಗಿ ಹೋರಾಡುತ್ತಲೇ ಇದ್ದೆ. ಕನಸಿನ ಬೆನ್ನತ್ತಿ ದಣಿವರಿಯದೇ ಸೆಣಸಾಡಿದೆ. ಶ್ರೇಷ್ಠ ಆಟಗಾರರ ಜೊತೆಗೆ, ಪೋರ್ಚುಗೀಸ್ ಅಭಿಮಾನಿಗಳ ಬೆಂಬಲದಿಂದ ನನ್ನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡಿದ್ದೇನೆ. ಹೋರಾಟಕ್ಕೆ ಮಾತ್ರ ನಾನು ಎಂದೂ ಹಿಂಜರಿದವನಲ್ಲ. ಕನಸು ಕಾಣುವುದನ್ನು ಮಾತ್ರ ನಿಲ್ಲಿಸಲ್ಲ' ಎಂದು ಹೇಳಿದ್ದಾರೆ.
ಕೊನೆಯಾದ ಕನಸು: ದುರದೃಷ್ಟವಶಾತ್ ನನ್ನ ಮಹತ್ವಾಕಾಂಕ್ಷೆ, ಕನಸು ಕ್ವಾರ್ಟರ್ಫೈನಲ್ನಲ್ಲಿ ಸೋಲುವ ಮೂಲಕ ಕೊನೆಗೊಂಡಿತು. ದೇಶಕ್ಕಾಗಿ ನನ್ನ ಸಮರ್ಪಣಾ ಭಾವ ಒಂದು ಕ್ಷಣವೂ ಬದಲಾಗಿಲ್ಲ. ಸಹ ಆಟಗಾರರು ಮತ್ತು ದೇಶಕ್ಕಾಗಿನ ಹೋರಾಟಕ್ಕೆ ಎಂದಿಗೂ ನಾನು ಬೆನ್ನು ತೋರಿಸುವುದಿಲ್ಲ. ಧನ್ಯವಾದಗಳು ಪೋರ್ಚುಗಲ್, ಧನ್ಯವಾದಗಳು ಕತಾರ್ ಎಂದು ಭಾವನಾತ್ಮಕವಾಗಿ ರೊನಾಲ್ಡೊ ಬರೆದುಕೊಂಡಿದ್ದಾರೆ.
ಓದಿ: 1970ರ ದಶಕದ ಖ್ಯಾತ ಅಥ್ಲೆಟಿಕ್ಸ್ ಕರ್ನಾಟಕದ ಕೆನ್ನೆತ್ ಪೊವೆಲ್ ನಿಧನ.. ಎಎಫ್ಒ ಸಂತಾಪ