ಬರ್ಲಿನ್(ಜರ್ಮನಿ): ಎದುರಾಳಿ ಜೊತೆ ಬಾಕ್ಸಿಂಗ್ ಆಡುತ್ತಿದ್ದಾಗಲೇ ರಿಂಗ್ನಲ್ಲೇ ಹೃದಯಾಘಾತಕ್ಕೊಳಗಾಗಿ ಯುವ ಬಾಕ್ಸರ್ ಮೂಸಾ ಯಮಕ್ ಸಾವನ್ನಪ್ಪಿದ್ದಾರೆ. ಅವರಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸೋಲಿಲ್ಲದ ಸರದಾರನಾಗಿದ್ದ ಯಂಗ್ ಬಾಕ್ಸರ್ ಇಲ್ಲಿಯವರೆಗೆ ತಾವು ಆಡಿರುವ 75 ಪಂದ್ಯಗಳಲ್ಲಿ ಎದುರಾಳಿಗಳನ್ನು ಮಣಿಸಿ ಗೆಲುವು ದಾಖಲಿಸಿದ್ದರು.
ಅವರ ದಿಢೀರ್ ಸಾವಿನಿಂದ ಕ್ರೀಡಾ ವಲಯ ಆಘಾತಕ್ಕೊಳಗಾಗಿದೆ. ಜರ್ಮನಿಯಲ್ಲಿ ವಾಸವಾಗಿದ್ದ ಬಾಕ್ಸರ್ ಮೂಸಾ ಯಮಕ್, ಕೇವಲ 12ನೇ ವಯಸ್ಸಿನಲ್ಲಿದ್ದಾಗಲೇ ಬಾಕ್ಸಿಂಗ್ ವೃತ್ತಿ ಬದುಕು ಆರಂಭಿಸಿದ್ದರು. WBF ಮತ್ತು GBU ಸ್ಪರ್ಧೆಗಳಲ್ಲಿ ಭಾಗಿಯಾಗಿ, ವಿಜಯಶಾಲಿಯಾಗಿದ್ದ ಇವರು ಹೆವಿವೇಯ್ಟ್ ಬಾಕ್ಸಿಂಗ್‌ನಲ್ಲಿ ಯುರೋಪಿಯನ್-ಏಷ್ಯನ್ ಚಾಂಪಿಯನ್ ಸಹ ಆಗಿದ್ದರು.

ಇದನ್ನೂ ಓದಿ: IPLನಲ್ಲಿ ಹೊಸ ಇತಿಹಾಸ ಬರೆದ ಡಿಕಾಕ್-ರಾಹುಲ್.. ಆರಂಭಿಕರಾಗಿ ಗರಿಷ್ಠ ರನ್ಗಳ ಜೊತೆಯಾಟ
ಜರ್ಮನಿಯ ಮ್ಯೂನಿಚ್ನಲ್ಲಿ ಬುಧವಾರ ನಡೆದ 84+ ಕೆಜಿ ಬಾಕ್ಸಿಂಗ್ ಪಂದ್ಯದ ಮೂರನೇ ಸುತ್ತಿನಲ್ಲಿ ಅವರು ಎದುರಾಳಿ ವಿರುದ್ಧ ಸೆಣಸಾಟ ನಡೆಸಿದ್ದ ಸಂದರ್ಭದಲ್ಲಿ ದಿಢೀರ್ ಹೃದಯಾಘಾತಕ್ಕೊಳಗಾಗಿ, ಕುಸಿದುಬಿದ್ದಿದ್ದರು. ಈ ವೇಳೆ ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಸಾವನ್ನಪ್ಪಿದ್ದಾರೆಂದು ವೈದ್ಯರ ತಂಡ ಘೋಷಣೆ ಮಾಡಿದೆ.