ನ್ಯೂಯಾರ್ಕ್: ಅಮೆರಿಕದಲ್ಲಿ ಪೊಲೀಸರಿಂದ ಸಾವಿಗೀಡಾದ ಜಾರ್ಜ್ ಫ್ಲಾಯ್ಡ್ ಅವರ ಅಂತಿಮ ಸಂಸ್ಕಾರ ಹಾಗೂ ಸ್ಮಾರಕ ಸೇವೆಗಳಿಗೆ ತಗಲುವ ವೆಚ್ಚವನ್ನು ಮಾಜಿ ಬಾಕ್ಸಿಂಗ್ ಚಾಂಪಿಯನ್ ಫ್ಲಾಯ್ಡ್ ಮೇವೆದರ್ ಭರಿಸುವುದಾಗಿ ಹೇಳಿಕೊಂಡಿದ್ದು, ಅದಕ್ಕೆ ಫ್ಲಾಯ್ಡ್ ಕುಟುಂಬವೂ ಸಮ್ಮತಿಸಿದೆ.
ಮೇವೆದರ್, ಫ್ಲಾಯ್ಡ್ ಕುಟುಂಬದ ಜೊತೆಗೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದು, ಜೂನ್ 9ರಂದು ಫ್ಲಾಯ್ಡ್ ತವರಿನಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಮೇವೇದರ್ ಪ್ರಮೋಷನ್ಸ್ ಸಿಇಒ ತಿಳಿಸಿದ್ದಾರೆ.
ಮೇ 25ರಂದು ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ ಪೊಲೀಸ್ ಅಧಿಕಾರಿ ಮಂಡಿಯಿಂದ ಒತ್ತಿ ಹಿಡಿದಿದ್ದರಿಂದ ಫ್ಲಾಯ್ಡ್ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದ್ದರು.
ಈ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಫ್ಲಾಯ್ಡ್ ಸಾವಿಗೆ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದು, ಕೆಲವೆಡೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಈ ಘಟನೆಯನ್ನು ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಸೇರಿದಂತೆ ಜಾಗತಿಕ ಮಟ್ಟದ ಹಲವಾರು ಕ್ರೀಡಾಪಟುಗಳು ಖಂಡಿಸಿದ್ದರು.
ಫ್ಲಾಯ್ಡ್ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಯ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ಉಳಿದ ಮೂವರು ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ.