ಗೊಂಡಾ (ಉತ್ತರ ಪ್ರದೇಶ): ಕೈಸರ್‌ಗಂಜ್‌ನ ಬಿಜೆಪಿ ಸಂಸದ ಮತ್ತು ಕುಸ್ತಿ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಜೂನ್ 5 ರಂದು ಅಯೋಧ್ಯೆಯಲ್ಲಿ ಮಾಡಲಿದ್ದ ಸಾರ್ವಜನಿಕ ಜಾಗೃತಿ ರ್‍ಯಾಲಿಯನ್ನು ಮುಂದೂಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಬಿಡುಗಡೆ ಮಾಡಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ತಮ್ಮ ವಿರುದ್ಧ ನಡೆಯುತ್ತಿರುವ ತನಿಖೆಯ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಮುಂದೂಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿ ರ್‍ಯಾಲಿಯನ್ನು ಮುಂದುಡುವುದಾಗಿ ಫೇಸ್‌ಬುಕ್‌ನಲ್ಲಿ ಬ್ರಿಜ್ ಭೂಷಣ್ ತಿಳಿಸಿದ್ದಾರೆ. ‘‘ನಿಮ್ಮ ಬೆಂಬಲದಿಂದ ಕಳೆದ 28 ವರ್ಷಗಳಿಂದ ಲೋಕಸಭೆಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ, ಅಧಿಕಾರ ಹಾಗೂ ವಿರೋಧ ಪಕ್ಷದಲ್ಲಿ ಎಲ್ಲ ಜಾತಿ, ಸಮುದಾಯ, ಧರ್ಮದ ಜನರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದೇನೆ. ಈ ಕಾರಣಗಳಿಂದಲೇ ನನ್ನ ರಾಜಕೀಯ ವಿರೋಧಿಗಳು ಮತ್ತು ಅವರ ಪಕ್ಷಗಳು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ಸಮಾಜದ ದುಷ್ಟ ಶಕ್ತಿಗಳ ಬಗ್ಗೆ ಚರ್ಚಿಸುವುದು ರ್‍ಯಾಲಿಯ ಉದ್ದೇಶವಾಗಿತ್ತು. ಆದರೆ ನಡೆಯುತ್ತಿರುವ ಪೊಲೀಸ್ ತನಿಖೆ ಮತ್ತು ಉನ್ನತ ನ್ಯಾಯಾಲಯದ ನಿರ್ದೇಶನಗಳ ದೃಷ್ಟಿಯಿಂದ ರ್‍ಯಾಲಿಯನ್ನು ಮುಂದೂಡಲಾಗಿದೆ" ಎಂದು ತಿಳಿಸಿದ್ದಾರೆ.
"ಎಲ್ಲಾ ಧರ್ಮ, ಜಾತಿ ಮತ್ತು ಪ್ರದೇಶಗಳ ಲಕ್ಷಾಂತರ ಬೆಂಬಲಿಗರು ಮತ್ತು ಹಿತೈಷಿಗಳು ಈ ವಿಷಯದಲ್ಲಿ ವಿನಮ್ರ ರೀತಿಯಲ್ಲಿ ನನ್ನನ್ನು ಬೆಂಬಲಿಸಿದ್ದಾರೆ. ಅದಕ್ಕಾಗಿಯೇ ನಾನು ಎಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ನಾನು ಮತ್ತು ನನ್ನ ಕುಟುಂಬವು ನಿಮಗೆ ಯಾವಾಗಲೂ ಋಣಿಯಾಗಿರುತ್ತೇನೆ. ಮೊದಲು ಪ್ರತಿಭಟಿಸುತ್ತಿರುವ ಕುಸ್ತಿಪಟುಗಳು ಆಗಾಗ ಅವರ ಬೇಡಿಕೆಗಳನ್ನು ಬದಲಾಯಿಸುತ್ತಾ ಬಂದಿದ್ದಾರೆ. ಅವರು ನನ್ನ ವಿರುದ್ಧ ಸಾಕ್ಷ್ಯಗಳನ್ನು ಕೊಟ್ಟರೆ ನಾನೂ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದಾರೆ.
ರ್‍ಯಾಲಿ ಮುಂದೂಡಲು ಕಾರಣವೇನು: ಮಾಧ್ಯಮಗಳ ವರದಿ ಪ್ರಕಾರ ಹರಿದ್ವಾರದ ಘಟನೆ ನಂತರ ಹೆಚ್ಚಿನ ಸಂಖ್ಯೆಯ ಕುಸ್ತಿಪಟುಗಳು ತಮ್ಮ ಮನೆಗಳಿಗೆ ಮರಳಿದ್ದಾರೆ. ಸಾಕ್ಷಿ ಮಲಿಕ್ ಮಾತ್ರ ದೆಹಲಿಗೆ ಹೋಗಿದ್ದಾರೆ. ಆದರೆ, ಅಯೋಧ್ಯೆಯಲ್ಲಿ ಉದ್ದೇಶಿತ ರ‍್ಯಾಲಿಗೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ, ಆದರೆ ನಂತರ ಈ ಜನಜಾಗೃತಿ ರ್‍ಯಾಲಿಯನ್ನು ಮುಂದೂಡಲು ವಿಭಿನ್ನ ಕಾರಣಗಳು ಮುನ್ನೆಲೆಗೆ ಬರುತ್ತಿವೆ.
ಗಂಗೆಯಲ್ಲಿ ಪದಕ ವಿಸರ್ಜಿಸಲು ತೆರಳಿದ್ದ ಕುಸ್ತಿಪಟುಗಳು: ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದ ಕುಸ್ತಿಪಟುಗಳು ಭಾನುವಾರ ನೂತನ ಸಂಸತ್ ಉದ್ಘಾಟನೆ ವೇಳೆ ಪ್ರತಿಭಟನಾ ರ್‍ಯಾಲಿ ಮಾಡಲು ಮುಂದಾದ ಕುಸ್ತಿ ಪಟುಗಳ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 147, 149, 186, 188, 332, 353, ಪಿಡಿಪಿಪಿ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ 7ಗಂಟೆಗಳ ಕಾಲ ಬಂಧನ ಮಾಡಿ ಬಿಡುಗಡೆ ಮಾಡಲಾಗಿತ್ತು.
ಈ ಘಟನೆಯ ನಂತರ ಕುಸ್ತಿಪಟುಗಳು ತಮ್ಮ ಪದಕವನ್ನು ಗಂಗೆಯಲ್ಲಿ ಎಸೆಯುವುದಾಗಿ ಹೇಳಿದ್ದರು. ಆದರೆ ಹರಿದ್ವಾರ ತಲುಪಿದ ಕುಸ್ತಿಪಟುಗಳನ್ನು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಮನವೊಲಿಸಿ ಅವರನ್ನು ಹಿಂದಿರುವಂತೆ ಮಾಡಿದ್ದರು ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಿದ್ದರು.
ಇದನ್ನು ಓದಿ: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬಂಧಿಸುವಷ್ಟು ಪುರಾವೆಗಳಿಲ್ಲ, 15 ದಿನದ ಒಳಗೆ ಕೋರ್ಟ್ಗೆ ವರದಿ ಸಲ್ಲಿಕೆ: ದೆಹಲಿ ಪೊಲೀಸ್