ನವದೆಹಲಿ: ಭಾರತ ತಂಡದ ಯಶಸ್ವಿ ಅಥ್ಲೆಟಿಕ್ಸ್ ಕೋಚ್ ಎನಿಸಿಕೊಂಡಿರುವ ಒ.ಎಂ.ನಂಬಿಯಾರ್, ತಮ್ಮನ್ನು 36 ವರ್ಷಗಳ ನಂತರ ಪದ್ಮಶ್ರೀ ಪ್ರಶಸ್ತಿಗೆ ಗುರುತಿಸಿರುವುದಕ್ಕೆ ತಡವಾಯಿತು, ಆದ್ರೂ ಗೌರವ ಸಿಕ್ಕಿಲ್ಲ ಎಂಬ ಕೊರಗಿಗಿಂತಲೂ ತಡವಾಗಿಯಾದರೂ ದೊರೆತಿರುವುದಕ್ಕೆ ಸಂತೋಷವಿದೆ ಎಂದು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಹಿಂದಿನ ದಿನ ಕೇಂದ್ರ ಸರ್ಕಾರ 7 ಮಂದಿ ಸಾಧಕರಿಗೆ ಪದ್ಮವಿಭೂಷಣ, 10 ಜನರಿಗೆ ಪದ್ಮ ಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ. ಪದ್ಮಶ್ರೀ ಪುರಸ್ಕೃತರಲ್ಲಿ 7 ಮಂದಿ ಕ್ರೀಡಾಪಟುಗಳಿದ್ದು, 70-80ರ ದಶಕದಲ್ಲಿ ಭಾರತದ ಖ್ಯಾತ ಹಾಗೂ ಏಷ್ಯಾದ ಅತ್ಯುತ್ತಮ ಅಥ್ಲೆಟಿಕ್ಸ್ ಕೋಚ್ ಎನಿಸಿಕೊಂಡಿದ್ದ ಒ.ಎಂ.ನಂಬಿಯಾರ್ ಕೂಡ ಸೇರಿದ್ದಾರೆ. ಅವರು ಭಾರತದ ಶ್ರೇಷ್ಠ ಅಥ್ಲೀಟ್ ಪಿ.ಟಿ.ಉಷಾ ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
"ಈ ಪ್ರಶಸ್ತಿ ಬಹಳ ವರ್ಷಗಳ ಹಿಂದೆ ಬಂದಿದ್ದರೆ ನಾನು ತುಂಬಾ ಖುಷಿ ಪಡುತ್ತಿದ್ದೆ. ಈಗಲೂ ನನಗೆ ಸಂತೋಷವಾಗಿದೆ. ಪ್ರಶಸ್ತಿ ಇಲ್ಲ ಎಂಬ ಭಾವನೆಗಿಂತಲೂ ತಡವಾಗಿ ಸಿಕ್ಕಿದೆ ಎಂಬುವುದೇ ಉತ್ತಮವಾಗಿದೆ" ಎಂದು ಪಾರ್ಕಿಸನ್ ಕಾಯಿಲೆಯಿಂದ ಬಳಲುತ್ತಿರುವ 88 ವರ್ಷದ ನಂಬಿಯಾರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಇವರ ಕೋಚಿಂಗ್ನಲ್ಲಿ ಪಳಗಿದ್ದ ಪಿ.ಟಿ.ಉಷಾ ಅವರಿಗೆ 1985ರಲ್ಲೇ ಪದ್ಮಶ್ರೀ ದೊರೆತಿತ್ತು. ಅದೇ ವರ್ಷ ನಂಬಿಯಾರ್ಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತ್ತು. ಇದೀಗ 36 ವರ್ಷಗಳ ನಂತರ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
"ನನ್ನಿಂದ ತರಬೇತಿ ಪಡೆದ ಟ್ರೈನಿಗಳು ಗೆದ್ದಿರುವ ಪ್ರತಿಯೊಂದು ಪದಕವು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ. ನನಗೆ ದ್ರೋಣಾಚಾರ್ಯ ಪ್ರಶಸ್ತಿ, ಅತ್ಯುತ್ತಮ ಏಷ್ಯನ್ ಕೋಚ್ ಪ್ರಶಸ್ತಿ ಮತ್ತು ಇದೀಗ ಪದ್ಮಶ್ರೀ ದೊರೆತಿರುವುದು ನನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ದೊರೆತಿರುವ ಮಾನ್ಯತೆ ಎಂದು ಪರಿಗಣಿಸುತ್ತೇನೆ" ಎಂದು ನಂಬಿಯಾರ್ ತಿಳಿಸಿದ್ದಾರೆ.
ಇದನ್ನು ಓದಿ:ಕರ್ನಾಟಕದ ಪ್ಯಾರಾ ಅಥ್ಲೀಟ್ ವೆಂಕಟೇಶ್ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ