ಕ್ಯಾನ್ಬೆರಾ(ಆಸ್ಟ್ರೇಲಿಯಾ): 2022ರ ಚಳಿಗಾಲದ ಒಲಿಂಪಿಕ್ಸ್ ಚೀನಾದ ಬೀಜಿಂಗ್ನಲ್ಲಿ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಅಮೆರಿಕ ಈಗಾಗಲೇ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿದೆ. ಈ ಬೆನ್ನಲ್ಲೇ ಆಸ್ಟ್ರೇಲಿಯಾ ಕೂಡಾ ಅಮೆರಿಕದ ಹಾದಿ ತುಳಿದಿದೆ.
ಚಳಿಗಾಲದ ಒಲಿಂಪಿಕ್ಸ್ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್, ತಮ್ಮ ದೇಶವೂ ಕೂಡಾ ಚೀನಾದ ಚಳಿಗಾಲದ ಒಲಿಂಪಿಕ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುವುದಾಗಿ ಹೇಳಿಕೆ ನೀಡಿದ್ದಾರೆ. ಹಲವು ವಿಚಾರಗಳಲ್ಲಿ ಚೀನಾದ ಹಸ್ತಕ್ಷೇಪ, ಅಣ್ವಸ್ತ್ರಚಾಲಿತ ಸಬ್ ಮೆರಿನ್ಗಳ ವಿಚಾರದಲ್ಲಿ ಹಲವು ಗಂಭೀರ ಭಿನ್ನಾಭಿಪ್ರಾಯಗಳು ಮೂಡಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ಆಸ್ಟ್ರೇಲಿಯಾ ತನ್ನ ಹಿತಾಸಕ್ತಿಗಳಿಗಳಿಂದ ಹಿಂದೆ ಸರಿಯುವುದಿಲ್ಲ. ಚೀನಾದ ಕ್ರೀಡಾಕೂಟಕ್ಕೆ ನಾವು ರಾಜತಾಂತ್ರಿಕ ಬಹಿಷ್ಕಾರ ಹಾಕಿರುವುದು ನಮಗೆ ಅಚ್ಚರಿ ಮೂಡಿಸುತ್ತಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಹೇಳಿದ್ದಾರೆ.
ಉಯ್ಘರ್ ಅಲ್ಪಸಂಖ್ಯಾತರ ನರಮೇಧ ಹಾಗೂ ಇತರ ಮಾನವ ಹಕ್ಕುಗಳ ಉಲ್ಲಂಘನೆ ಚೀನಾದಲ್ಲಿ ಜರುಗುತ್ತಿದೆ ಎಂದು ಆರೋಪಿಸಿ ಅಮೆರಿಕ ದೇಶ ಚೀನಾದ ಚಳಿಗಾಲ ಒಲಿಂಪಿಕ್ ಮೇಲೆ ರಾಜತಾಂತ್ರಿಕ ನಿರ್ಬಂಧ ಹೇರಿತ್ತು. ಇದಾದ ಒಂದು ದಿನದ ನಂತರ ಆಸ್ಟ್ರೇಲಿಯಾ ಇದೇ ದಾರಿ ಅನುಸರಿಸಿದೆ.
ಚೀನಾದ ಸಾಗರೋತ್ತರ ಪ್ರಭಾವದ ಕಾರ್ಯಾಚರಣೆಗಳ ವಿರುದ್ಧ ಆಸ್ಟ್ರೇಲಿಯಾ ಅಸಮಾಧಾನ, 5G ಒಪ್ಪಂದಗಳಿಂದ ಚೀನಾದ ಹುವೈ(Huawei) ಕಂಪನಿಗೆ ನಿರ್ಬಂಧ, ಕೊರೊನಾ ವೈರಸ್ ಮೂಲದ ಪತ್ತೆಗೆ ಸ್ವತಂತ್ರ ತನಿಖೆಗೆ ಆಗ್ರಹ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಸ್ಟ್ರೇಲಿಯಾ ವಿರುದ್ಧ ಚೀನಾ ಈಗಾಗಲೇ ಕೋಪಗೊಂಡಿದೆ. ಈಗ ಒಲಿಂಪಿಕ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುತ್ತಿರುವುದು ಮತ್ತಷ್ಟ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ.
ಏನಿದು ರಾಜತಾಂತ್ರಿಕ ಬಹಿಷ್ಕಾರ?
ಚೀನಾದ ವಿರುದ್ಧ ಸದಾ ಕೆಂಡ ಕಾರುತ್ತಿರುವ ಅಮೆರಿಕ ಮತ್ತು ಆಸ್ಟ್ರೇಲಿಯಾ ಚಳಿಗಾಲದ ಒಲಿಂಪಿಕ್ ವಿರುದ್ಧ ರಾಜತಾಂತ್ರಿಕ ಬಹಿಷ್ಕಾರ ತಂತ್ರವನ್ನು ಅಳವಡಿಸಿಕೊಂಡಿವೆ. ಒಂದು ವೇಳೆ ತಮ್ಮ ರಾಷ್ಟ್ರದಲ್ಲಿನ ಕ್ರೀಡಾಪಟುಗಳಿಗೆ ಚೀನಾದಲ್ಲಿನ ಕ್ರೀಡಾಕೂಟಕ್ಕೆ ಹಾಜರಾಗಬಾರದು ಎಂದು ಆದೇಶಿಸಿದರೆ, ಅದು ಕಠಿಣ ನಿಯಮವಾಗಲಿದ್ದು, ಕ್ರೀಡಾಸ್ಫೂರ್ತಿಯನ್ನು ಹತ್ತಿಕ್ಕಿದ ಆರೋಪ ಈ ದೇಶಗಳ ಮೇಲೆ ಕೇಳಿ ಬರುವ ಸಾಧ್ಯತೆ ಇದೆ.
ಆದ್ದರಿಂದ ತಮ್ಮ ರಾಷ್ಟ್ರಗಳಿಂದ ಸರ್ಕಾರದ ಯಾವುದೇ ಪ್ರತಿನಿಧಿ ಚಳಿಗಾಲದ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ ಎಂಬ ಹೇಳಿಕೆಯನ್ನು ರಾಜತಾಂತ್ರಿಕ ಬಹಿಷ್ಕಾರದ ಅಡಿಯಲ್ಲಿ ಈ ರಾಷ್ಟ್ರಗಳು ಘೋಷಿಸಿವೆ. ಸಾಮಾನ್ಯವಾಗಿ ಈ ರಾಜತಾಂತ್ರಿಕ ಬಹಿಷ್ಕಾರವಾದಾಗ ಕ್ರೀಡಾಪಟುಗಳು ಕೂಡಾ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತದೆ.