ಮೆಲ್ಬೋರ್ನ್ (ಆಸ್ಟ್ರೇಲಿಯ): ಆಸ್ಟ್ರೇಲಿಯನ್ ಓಪನ್ 2023 ರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ರಷ್ಯಾ ಮತ್ತು ಬೆಲಾರಸ್ ರಾಷ್ಟ್ರಗಳ ರಾಷ್ಟ್ರಧ್ವಜಗಳನ್ನು ನಿಷೇಧಿಸಲಾಗಿದೆ. ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ನ ಪ್ರಥಮ ದಿನ ರಷ್ಯಾದ ಕಮಿಲಾ ರಖಿಮೋವಾ ಮತ್ತು ಉಕ್ರೇನ್‌ನ ಕಟಾರಿನಾ ಬೆಂಡಲ್ ನಡುವೆ ಪಂದ್ಯ ನಡೆಯಿತು ಈ ಪಂದ್ಯದಲ್ಲಿ ಕೆಲವು ಪ್ರೇಕ್ಷಕರು ಧ್ವಜವನ್ನು ಹಿಡಿದು ಬಂದಿದ್ದರು.
ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಯುವ ಪಂದ್ಯಗಳಲ್ಲಿ ಸಾಮಾನ್ಯವಾಗಿ ಧ್ವಜವನ್ನು ಪ್ರದರ್ಶಿಸಬಹುದು. ಆದರೆ, ಉಕ್ರೇನ್‌ನ ಮಿಲಿಟರಿ ಆಕ್ರಮಣದಿಂದಾಗಿ ಟೆನಿಸ್ ಆಸ್ಟ್ರೇಲಿಯಾವು ಈ ಎರಡು ದೇಶಗಳ ಧ್ವಜದ ಪ್ರದರ್ಶನಕ್ಕೆ ನಿರ್ಬಂಧ ಹೇರಿದೆ. ಮೊದಲ ಪಂದ್ಯದಲ್ಲಿ ನಡೆದ ಘಟನೆಯಿಂದ ಉಕ್ರೇನ್ ರಾಯಭಾರಿ ಮಾಡಿದ ಟ್ವೀಟ್ಗೆ ಟೆನಿಸ್ ಆಸ್ಟ್ರೇಲಿಯಾವು ಈ ನಿರ್ಧಾರ ಘೋಷಿಸಿದೆ.
'ಆಸ್ಟ್ರೇಲಿಯನ್ ಓಪನ್‌ನಲ್ಲಿ ಉಕ್ರೇನಿಯನ್ ಟೆನಿಸ್ ಆಟಗಾರ್ತಿ ಕಟೆರಿನಾ ಬೈಂಡ್ಲ್ ಅವರ ಆಟದ ಸಂದರ್ಭದಲ್ಲಿ ರಷ್ಯಾದ ಧ್ವಜದ ಸಾರ್ವಜನಿಕ ಪ್ರದರ್ಶನವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಟೆನಿಸ್ ಆಸ್ಟ್ರೇಲಿಯಾ ತನ್ನ 'ತಟಸ್ಥ ಧ್ವಜ' ನೀತಿಯನ್ನು ತಕ್ಷಣವೇ ಜಾರಿಗೊಳಿಸಲು ನಾನು ಕರೆ ನೀಡುತ್ತೇನೆ,' ಉಕ್ರೇನ್ ರಾಯಭಾರಿ ವಾಸಿಲ್ ಮೈರೋಶ್ನಿಚೆಂಕೊ ಟ್ವೀಟ್ ಮಾಡಿದ್ದಾರೆ.
ಟೆನಿಸ್ ಆಸ್ಟ್ರೇಲಿಯಾವು,' ನಮ್ಮ ಮೂಲ ನೀತಿಯೆಂದರೆ ಅಭಿಮಾನಿಗಳು ಧ್ವಜಗಳನ್ನು ತರಬಹುದು. ಆದರೆ, ಆಟಗಾರರ ಆಟಕ್ಕೆ ಅಡ್ಡಿಪಡಿಸು ಧ್ವಜಗಳನ್ನು ಬಳಸಬಾರದು. ಆಟಗಾರರು ಮತ್ತು ಅಭಿಮಾನಿಗಳೊಂದಿಗೆ ಉತ್ತಮ ವಾತಾವರಣವನ್ನು ಒದಗಿಸಲು ನಾವು ನೀತಿಗಳನ್ನು ಬದಲಾವಣೆ ಮಾಡಿದ್ದೇವೆ. ಆಟಗಾರರಿಗೆ ಆಟದ ಮಧ್ಯೆ ಇರುಸು ಮುರುಸು ಉಂಟಾಗದಂತೆ ಮಾಡಲು ನೊಡಿಕೊಳ್ಳಲು ನಾವು ಭಯಸುತ್ತೇವೆ' ಎಂದಿದೆ.
ಆಸ್ಟ್ರೇಲಿಯನ್ ಓಪನ್ಗೆ ಗಾಯದ ಸಮಸ್ಯೆ: ವಿಶ್ವದ ಮಾಜಿ ನಂ.1 ಟೆನಿಸ್ಸಿಗ ಸರ್ಬಿಯಾದ ನೊವಾಕ್ ಜಾಕೊವಿಚ್ ಸ್ನಾಯು ಸೆಳೆತಕ್ಕೆ ತುತ್ತಾದ ಬೆನ್ನಲ್ಲೇ, ಮೊಣಕಾಲಿನ ಗಾಯದಿಂದಾಗಿ ಮಾಜಿ ಫೈನಲಿಸ್ಟ್ ಕ್ರೊವೇಷಿಯಾದ ಮರಿನ್ ಸಿಲಿಕ್ ಟೂರ್ನಿಯಿಂದಲೇ ಹಿಂದೆ ಸರಿದಿದ್ದರು.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಮರಿನ್ ಸಿಲಿಕ್, ನನ್ನ ವೃತ್ತಿ ಜೀವನದ ವರ್ಷಾರಂಭ ಉತ್ತಮವಾಗಿಲ್ಲ. ಮೊಣಕಾಲಿನ ಗಾಯಕ್ಕೀಡಾಗಿದ್ದು, ಆಸ್ಟ್ರೇಲಿಯನ್ ಓಪನ್ನಿಂದ ಹಿಂದೆ ಸರಿಯುತ್ತಿದ್ದೇನೆ. ಈ ವರ್ಷ ಆಡಲು ಸಾಧ್ಯವಾಗದ ಕಾರಣ ಮುಂದಿನ ವರ್ಷ ಮತ್ತೆ ಮೆಲ್ಬೋರ್ನ್ಗೆ ಬರುವೆ. ಆರೋಗ್ಯಕ್ಕೆ ಆದ್ಯತೆ ನೀಡಬೇಕಿದೆ ಎಂದು ಬರೆದುಕೊಂಡಿದ್ದರು. 34 ವರ್ಷದ ಕ್ರೊಯೇಷಿಯಾದ ಆಟಗಾರ 2018 ರ ಫೈನಲ್‌ನಲ್ಲಿ ವಿಶ್ವಶ್ರೇಷ್ಠ ಮಾಜಿ ಟೆನಿಸ್ಸಿಗ ರೋಜರ್ ಫೆಡರರ್ ವಿರುದ್ಧ ಸೋಲನುಭವಿಸಿ ರನ್ನರ್ ಅಪ್ ಆಗಿದ್ದರು.
ಭಾರತದ ಪುಣೆಯಲ್ಲಿ ಈಚೆಗೆ ನಡೆದ ಮಹಾರಾಷ್ಟ್ರ ಓಪನ್‌ನಲ್ಲಿ ಟೆನಿಸ್ ವರ್ಷ ಆರಂಭಿಸಿದ್ದ ಸಿಲಿಕ್ ಟ್ಯಾಲನ್ ಗ್ರೀಕ್ಸ್‌ಪೂರ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕಾಲಿನ ಗಾಯಕ್ಕೀಡಾಗಿದ್ದರು. ಬಳಿಕ ಎಟಿಪಿ ಈವೆಂಟ್‌ನಿಂದ ಹಿಂದೆ ಸರಿದ ವಿಶ್ವದ 18 ನೇ ಶ್ರೇಯಾಂಕಿತ ಆಟಗಾರ ಈಗ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ನಿಂದಲೂ ಹೊರಬಿದ್ದಿದ್ದಾರೆ.
ನೊವಾಕ್ಗೆ ಸ್ನಾಯುಸೆಳೆತದ ಭೀತಿ: ಇನ್ನೊಂದೆಡೆ, ಮಾಜಿ ವಿಶ್ವ ನಂ.1 ಟೆನಿಸ್ಸಿಗ ಸರ್ಬಿಯಾದ ನೊವಾಕ್ ಜಾಕೊವಿಚ್ ಕೂಡ ಗಾಯದ ಸಮಸ್ಯೆಗೀಡಾಗಿದ್ದಾರೆ. ರಷ್ಯಾ ಟೆನಿಸ್ಸಿಗ ಡೇನಿಯಲ್ ಮೆಡ್ವೆದೇವ್ ಅವರ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಸ್ನಾಯು ಸೆಳೆಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಅಭ್ಯಾಸ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು.
ಇದನ್ನೂ ಓದಿ: ಹಾಕಿ ವಿಶ್ವಕಪ್: ಭಾರತದ ಮುಂದೆ ಮಂಡಿಯೂರಿದ ಸ್ಪೇನ್: 2-0 ಗೋಲ್ಗಳಿಂದ ಗೆಲುವು