ಇಂಡೊನೇಷ್ಯಾ: ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ದಕ್ಷಿಣ ಕೊರಿಯಾ ವಿರುದ್ಧ 4-4 ಗೋಲುಗಳಿಂದ ಡ್ರಾ ಸಾಧಿಸುವ ಮೂಲಕ ಏಷ್ಯಾ ಕಪ್ ಟೂರ್ನಿಯ ಫೈನಲ್ ತಲುಪುವಲ್ಲಿ ವಿಫಲವಾಗಿದೆ.
ಸೂಪರ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ದಕ್ಷಿಣ ಕೊರಿಯಾದ ವಿರುದ್ಧ ಅದ್ಭುತ ಪ್ರದರ್ಶನ ತೋರಿದರೂ, ಪ್ರಶಸ್ತಿ ಸುತ್ತು ತಲುಪವಲ್ಲಿ ವಿಫಲವಾಯಿತು. ಇದಕ್ಕೂ ಮುನ್ನ ನಡೆದ ಮಲೇಷ್ಯಾ ಮತ್ತು ಜಪಾನ್ ನಡುವಿನ ಪಂದ್ಯದಲ್ಲಿ ಮಲೇಷ್ಯಾ 5-0ಯಿಂದ ಜಪಾನ್ ವಿರುದ್ಧ ಗೆಲುವು ಸಾಧಿಸಿತ್ತು. ಇದರಿಂದಾಗಿ ಭಾರತ, ಕೊರಿಯಾ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆ ಉಂಟಾಗಿತ್ತು.
ಮಲೇಷ್ಯಾ, ಭಾರತ ಮತ್ತು ದಕ್ಷಿಣ ಕೊರಿಯಾ ತಲಾ 5 ಪಾಯಿಂಟ್ಸ್ ಗಳಿಸಿದರೂ, ಗೋಲು ಗಳಿಕೆಯಲ್ಲಿ ಭಾರತ ಹಿಂದೆ ಬಿದ್ದ ಕಾರಣ, ಮಲೇಷ್ಯಾ ಮತ್ತು ಕೊರಿಯಾ ತಂಡಗಳು ಪ್ರಶಸ್ತಿ ಸುತ್ತು ಪ್ರವೇಶಿಸಿದವು.
ಬೀರೇಂದ್ರ ಲಾಕ್ರಾ ಮುಂದಾಳತ್ವದ ಭಾರತ ತಂಡ ಈ ಪಂದ್ಯದಲ್ಲಿ ಚುರುಕಿನ ಆಟದ ಮೂಲಕ ಗಮನ ಸೆಳೆದರೂ, ಗೆಲುವು ಸಾಧಿಸುವಲ್ಲಿ ವಿಫಲವಾಯಿತು. ಭಾರತ ತಂಡದ ಪರ ನೀಲಂ ಸಂಜೀಪ್ ಕ್ಸೆಸ್ (9ನೇ ನಿಮಿಷ), ದಿಪ್ಸನ್ ಟಿರ್ಕಿ (21ನೇ ನಿ.), ಮಹೇಶ್ ಶೇಷೇಗೌಡ (22ನೇ ನಿ.) ಮತ್ತು ಶಕ್ತಿವೇಲ್ ಮರೀಶ್ವರನ್ (37ನೇ ನಿ.) ಗೋಲು ಗಳಿಸುವ ಮೂಲಕ ಕೈಚಳಕ ತೋರಿದರು.
ಇನ್ನು ದಕ್ಷಿಣ ಕೊರಿಯಾದ ಜಾಂಗ್ ಜಾಂಗ್‌ಯೂನ್ (13ನೇ ನಿ.), ಜೀ ವೂ ಚಿಯೊನ್ (18ನೇ ನಿ.), ಕಿಮ್ ಜಾಂಗ್ ಹೂ (28ನೇ ನಿ.) ಮತ್ತು ಜುಂಗ್ ಮಂಜೆ (44ನೇ ನಿ.) ಗೋಲು ಗಳಿಸಿ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡರು.
ನಾಳೆ(ಬುಧವಾರ) ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಜಪಾನ್ ತಂಡಗಳು ಮೂರನೇ ಸ್ಥಾನಕ್ಕಾಗಿ ಸೆಣಸಾಡಲಿವೆ. ಇನ್ನು ಅದೇ ದಿನ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ಫೈನಲ್ ಆಡಲಿವೆ.
ಓದಿ: ಅಂತಾರಾಷ್ಟ್ರೀಯ ತಂಡ ಸೇರುವ ಹೆದ್ದಾರಿ 'ಎಮರ್ಜಿಂಗ್ ಪ್ಲೇಯರ್'.. ಯಾರಿಗೆಲ್ಲ ದಕ್ಕಿದೆ ಈ ಪ್ರಶಸ್ತಿ