ನವದೆಹಲಿ : ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಭಾರತದ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ಅವರ ಸಾಧನೆಯ ನೆನಪಿಗಾಗಿ ಆಗಸ್ಟ್ 7ರಂದು ಜಾವಲಿನ್ ಥ್ರೋ ದಿನಾಚಾರಣೆ ಮಾಡಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ನಿರ್ಧರಿಸಿದೆ.
ಆಗಸ್ಟ್ 7ರಂದು ನೀರಜ್ ಚೋಪ್ರಾ ಜಾವಲಿನ್ನ 87.58 ಮೀಟರ್ ದೂರ ಎಸೆಯುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು.
"ಭಾರತದಾದ್ಯಂತ ಜಾವಲಿನ್ ಥ್ರೋ ಕ್ರೀಡೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಆಗಸ್ಟ್ 7ರಂದು ರಾಷ್ಟ್ರೀಯ ಜಾವಲಿನ್ ಡೇ ಆಚರಣೆ ಮಾಡಲಾಗುವುದು. ಜೊತೆಗೆ ರಾಜ್ಯಮಟ್ಟದಲ್ಲಿ ಜಾವಲಿನ್ ಥ್ರೋ ಸ್ಪರ್ಧೆ ಏರ್ಪಡಿಸಲಾಗುವುದು" ಎಂದು ಅಥ್ಲೆಟಿಕ್ಸ್ ಫೆಡೆರೇಷನ್ ಆಫ್ ಇಂಡಿಯಾದ ಪ್ಲಾನಿಂಗ್ ಕಮಿಷನ್ ಅಧ್ಯಕ್ಷ ಲಲಿತ್ ಭನೋತ್ ತಿಳಿಸಿದ್ದಾರೆ.
ಅಂತರ್ ಜಿಲ್ಲಾ ಸ್ಪರ್ಧೆ ಏರ್ಪಡಿಸುವಾಗ ನಾವೇ ಜಾವಲಿನ್ಗಳನ್ನು ಒದಗಿಸಿ ಕೊಡುತ್ತೇವೆ. ಈ ಕ್ರೀಡೆಯನ್ನು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಾಗಿ ವಿಸ್ತರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ 2018ರಿಂದ ಎಎಫ್‌ಐ ರಾಷ್ಟ್ರೀಯ ಜಾವಲಿನ್ ಥ್ರೋ ಸ್ಪರ್ಧೆ ಏರ್ಪಡಿಸಿಕೊಂಡು ಬರುತ್ತಿದೆ. ಈ ವರ್ಷ ಅಕ್ಟೋಬರ್ನಲ್ಲಿ 3ನೇ ಆವೃತ್ತಿಯ ಸ್ಪರ್ಧೆ ನಡೆಯಲಿದೆ.
ಭವಿಷ್ಯದಲ್ಲಿ ಎಎಫ್‌ಐ ನನ್ನ ಸಾಧನೆ ನೆನಪಿನಲ್ಲಿಟ್ಟುಕೊಳ್ಳಲು ತೆಗೆದುಕೊಂಡಿರುವ ಈ ನಿರ್ಧಾರ ನನಗೆ ತುಂಬಾ ಖುಷಿಯಿದೆ. ನನ್ನ ಸಾಧನೆಯು ಈ ದೇಶದ ಯುವಕರನ್ನು ಅಥ್ಲೆಟಿಕ್ಸ್, ವಿಶೇಷವಾಗಿ ಜಾವೆಲಿನ್ ಕ್ರೀಡೆಯ ಆಯ್ಕೆಗೆ ಪ್ರೇರೇಪಿಸಲು ಒಂದು ಕಾರಣವಾದರೆ, ನನಗೆ ಅದಕ್ಕಿಂತ ಬೇರೆ ಸಂತೋಷವಿಲ್ಲ ಎಂದು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಚೋಪ್ರಾ ತಿಳಿಸಿದ್ದಾರೆ.
ಇದನ್ನು ಓದಿ : ಚಿನ್ನದ ಪದಕ ದೇಶಕ್ಕೆ ಅರ್ಪಿಸಿದ ನೀರಜ್.. ಅಭಿನಂದನಾ ಸಮಾರಂಭದಲ್ಲಿ ಮನದಾಳ ಬಿಚ್ಚಿಟ್ಟ ಅಥ್ಲೀಟ್ಸ್!