ನವದೆಹಲಿ: ಕೊವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಪ್ರದಾನ ಸಮಾರಂಭ ವರ್ಚುವಲ್ ಮೋಡ್‌ನಲ್ಲಿ ನಡೆಯಲಿದೆ.
ಆಗಸ್ಟ್ 29ರ ಶನಿವಾರ ಪ್ರಶಸ್ತಿ ವಿಜೇತರಿಗೆ ವರ್ಚುವಲ್ ಮೋಡ್‌ನಲ್ಲಿ ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವರ್ಚುವಲ್ ಸ್ವರೂಪದಲ್ಲಿ ಭಾರತದ ರಾಷ್ಟ್ರಪತಿಗಳು ತಮ್ಮ ನಿವಾಸದಿಂದ ಎನ್ಐಸಿ ಲಿಂಕ್ ಬಳಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದು, ಪ್ರಶಸ್ತಿ ಸ್ವೀಕರಿಸುವವರು ದೇಶದ ವಿವಿಧ ಸ್ಥಳಗಳಲ್ಲಿನ ಎಸ್‌ಎಐ ಮತ್ತು ಎನ್‌ಐಸಿ ಕೇಂದ್ರಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಇತರ ಗಣ್ಯರು ವಿಜ್ಞಾನ ಭವನದಲ್ಲಿ ಉಪಸ್ಥಿತರಿರುತ್ತಾರೆ.
ಏಳು ವಿಭಾಗಗಳಲ್ಲಿ 74 ಪ್ರಶಸ್ತಿಗಳಿವೆ. ಒಟ್ಟು 65 ಪ್ರಶಸ್ತಿ ವಿಜೇತರು ವಿವಿಧ ಸ್ಥಳಗಳಿಂದ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಒಂಭತ್ತು ಪ್ರಶಸ್ತಿ ವಿಜೇತರು ಕ್ವಾರಂಟೈನ್, ಕೊರೊನಾ ಸೊಂಕು, ಅನಾರೋಗ್ಯ ಅಥವಾ ದೇಶದಲ್ಲಿ ಇಲ್ಲದಿರುವುದು ಮುಂತಾದ ಹಲವಾರು ಕಾರಣಗಳಿಂದ ಹಾಜರಾಗುವುದಿಲ್ಲ.
ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಲ್ಲಾ ಆರೋಗ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗಣ್ಯರು ಮತ್ತು ಪ್ರಶಸ್ತಿ ಪುರಸ್ಕೃತರು ಇರುವ ಎಲ್ಲಾ ಸ್ಥಳಗಳಲ್ಲಿ ಅನುಸರಿಸಲಾಗುತ್ತಿದೆ. ಇದಲ್ಲದೆ ಪ್ರತೀ ಪ್ರಶಸ್ತಿ ವಿಜೇತರು ಸ್ಥಳಕ್ಕೆ ತೆರಳುವ ಮೊದಲು ಕೋವಿಡ್-19 ಪರೀಕ್ಷೆಗೆ ಒಳಗಾಗುವಂತೆ ಕ್ರೀಡಾ ಸಚಿವಾಲಯ ಸೂಚಿಸಿದೆ.
ಸೋಂಕಿಗೆ ತುತ್ತಾದ ಕಾರಣದಿಂದಾಗಿ ಮೂವರು ಪ್ರಶಸ್ತಿ ವಿಜೇತರು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ಕ್ರೀಡಾಪಟುಗಳು ಭಾಗವಹಿಸುವ ಕೇಂದ್ರಗಳಲ್ಲಿ ಎಲ್ಲಾ ಆರೋಗ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಎಲ್ಲಾ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಸಾಮಾಜಿಕ ಅಂತರನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.