ಬೆಂಗಳೂರು : ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿಂತೆ ತಂಡದ ಇತರ ಆರು ಮಂದಿ ಆಟಗಾರ್ತಿಯರು ಹಾಗೂ ಇಬ್ಬರು ಸಹಾಯಕ ಸಿಬ್ಬಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇವರೆಲ್ಲರೂ ಎರಡು ವಾರಗಳ ಹಿಂದೆ ಏಪ್ರಿಲ್ 24ರಂದು ಬ್ರೇಕ್ ಮುಗಿಸಿ ತವರಿನಿಂದ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ(ಸಾಯ್)ದಲ್ಲಿ ತರಬೇತಿ ಶಿಬಿರಕ್ಕೆ ಆಗಮಿಸಿದ್ದ ವೇಳೆ ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ನಾಯಕಿ ರಾಣಿ ರಾಂಪಾಲ್ ಜೊತೆಗೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್, ನವನೀತ್ ಕೌರ್ ಮತ್ತು ಸುಶೀಲಾ ಮತ್ತು ಇಬ್ಬರು ಸಹಾಯಕ ಸಿಬ್ಬಂದಿ, ವಿಡಿಯೋ ಅನಾಲಿಸ್ಟ್ ಅಮೃತ್ಪ್ರಕಾಶ್ ಹಾಗೂ ವೈಜ್ಞಾನಿಕ ಸಲಹೆಗಾರ ವೇಯ್ನ್ ಲೊಂಬಾರ್ಡ್ ಸದ್ಯ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
"ಕಳೆದ ಎರಡು ವಾರಗಳಿಂದ ಕರೆ ಮತ್ತು ಸಂದೇಶಗಳ ಮೂಲಕ ನಮ್ಮ ಮೇಲೆ ಪ್ರೀತಿ ಮತ್ತು ಮಾನಸಿಕ ಬೆಂಬಲ ನೀಡಿದ ಪ್ರತಿಯೊಬ್ಬರಿಗು ಕೃತಜ್ಞತೆಗಳು. ನಾನು ಹಾಗೂ ನನ್ನ ಸಹ ಆಟಗಾರ್ತಿಯರು ಮತ್ತು ಸಹಾಯಕ ಸಿಬ್ಬಂದಿ ಕೋವಿಡ್‌ನಿಂದ ಗುಣಮುಖವಾಗಿದ್ದೇವೆ.
ನಮಗೆ ಅಭಿಮಾನಿಗಳ ಆಶೀರ್ವಾದ ಸಿಕ್ಕಿದೆ ಮತ್ತು ನಮ್ಮನ್ನು ಚೆನ್ನಾಗಿ ನೋಡಿಕೊಂಡ ಸಾಯ್ ಹಾಗೂ ಹಾಕಿ ಇಂಡಿಯಾಗೆ ವಿಶೇಷ ಧನ್ಯವಾದಗಳು" ಎಂದು ರಾಣಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. "ಸಾಂಕ್ರಾಮಿಕದ ಸಂದರ್ಭದಲ್ಲಿ ಅನೇಕ ಜನರು ತಮ್ಮ ಪ್ರೀತಿಪಾತ್ರರಾದವರನ್ನು ಕಳೆದುಕೊಳ್ಳುತ್ತಿದ್ದಾರೆ.
ಅವರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಈ ಕಠಿಣ ಸಂದರ್ಭದಲ್ಲಿ ದಯವಿಟ್ಟು ನಿಮ್ಮ ಹತ್ತಿರದ ಮತ್ತು ಆತ್ಮೀಯರಿಗೆ ಯಾವುದೇ ರೀತಿಯಲ್ಲಿ ನಿಮ್ಮಿಂದಾಗುವ ಸಹಾಯ ಮಾಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿ:ಮುಂದೂಡಿರುವ ಐಪಿಎಲ್ ಪೂರ್ಣಗೊಳಿಸಲು ಯುಎಇಗಿಂತಲೂ ಇಂಗ್ಲೆಂಡ್ ಉತ್ತಮ ಸ್ಥಳ: ಪೀಟರ್ಸನ್