ಬರ್ಲಿನ್: ಜರ್ಮನಿಯ ಲೋಯರ್ ಲೀಗ್ ಅಮೇಚುರ್ ಫುಟ್ಬಾಲ್ ತಂಡವೊಂದು 7 ಆಟಗಾರರನ್ನು ಕಣಕ್ಕಿಳಿಸಿ 37-0 ಗೋಲುಗಳ ಅಂತರದ ಅವಮಾನಕರ ಸೋಲಿಗೆ ತುತ್ತಾಗಿದೆ.
ಮೈದಾನಕ್ಕಿಳಿದಿದ್ದ 7 ಆಟಗಾರರು ಎದುರಾಳಿ ತಂಡದಿಂದ ಕೋವಿಡ್ 19 ವೈರಸ್ ಹರಡಬಹುದು ಎಂಬ ಭಯದಿಂದ ಎದುರಾಳಿ ಆಟಗಾರರ ವಿರುದ್ಧ 2 ಮೀಟರ್ ಸಾಮಾಜಿಕ ಅಂತರ ಕಾಯ್ದಕೊಂಡ ಪರಿಣಾಮ ಬೃಹತ್ ಗೋಲುಗಳ ಅಂತರದ ಸೋಲಿಗೆ ತುತ್ತಾಗಿದೆ.
ಜರ್ಮನಿಯ ಅತ್ಯಂತ ಕೆಳಸ್ಥರದ ಲೀಗ್ಗಳಲ್ಲಿ ಒಂದಾಗಿರುವ ಕ್ರೀಸ್ಕ್ಲಾಸ್ಸೆ ಟೂರ್ನಿಯಲ್ಲಿ ಕಳೆದವಾರ ನಡೆದಿದ್ದ ಈ ಪಂದ್ಯದಲ್ಲಿ ಎಸ್ಜಿ ರಿಫಡಾರ್ಫ್ II ತಂಡ ಪ್ರತಿಸ್ಪರ್ಧಿಯಾದ ಎಸ್‌ವಿ ಹೋಲ್ಡೆನ್‌ಸ್ಟೆಡ್ II ತಂಡದ ವಿರುದ್ಧ ಸೋಲು ಕಂಡಿದೆ.
ಹೋಲ್ಡೆನ್‌ಸ್ಟೆಡ್ ತಂಡ ಎದುರಾಳಿಯ ನ್ಯೂನತೆಯ ಬಳಸಿಕೊಂಡು ಪ್ರತಿ ಎರಡು ನಿಮಿಷಗಳಿಗೊಂದು ಗೋಲುಗಳಿಸುವ ಮೂಲಕ ಬೃಹತ್ ಅಂತರದ ಜಯ ಸಾಧಿಸಿದೆ.
ಪಂದ್ಯ ನಡೆಯುವುದಕ್ಕೆ ಹಿಂದಿನ ವಾರ ಹೋಲ್ಡೆನ್‌ಸ್ಟೆಡ್ ತಂಡದ ಕೆಲವು ಆಟಗಾರರಿಗೆ ಕೊರೊನಾ ವೈರಸ್ ಇದ್ದು, ಅವರು 14 ದಿನಗಳ ಕ್ವಾರಂಟೈನ್ನಲ್ಲಿದ್ದು ಬಂದಿದ್ದರು. ಈ ಕಾರಣದಿಂದ ರಿಫಡಾರ್ಫ್ ತಂಡದವರು ಈ ಪಂದ್ಯವನ್ನು ಮುಂದೂಡಲು ಕೇಳಿಕೊಂಡಿದ್ದರು. ಆದರೆ, ಹೋಲ್ಡೆನ್‌ಸ್ಟೆಡ್ ತಂಡ ಒಪ್ಪದಿದ್ದಕ್ಕೆ ಕೇವಲ 7 ಆಟಗಾರರನ್ನು ಮಾತ್ರ ರಿಫಡಾರ್ಫ್ ತಂಡ ಕಣಕ್ಕಿಳಿಸಿತ್ತು. ಪರಿಣಾಮ ಈ ರೀತಿಯ ದಾರುಣ ಸೋಲಿಗೆ ತುತ್ತಾಯಿತು.
ಫುಟ್ಬಾಲ್ ಇತಿಹಾಸದಲ್ಲಿ ಅತಿ ದೊಡ್ಡ ಸೋಲು 2002ರಲ್ಲಿ ದಾಖಲಾಗಿದೆ. ಅಂದು ಎಎಸ್ ಅಡೆಮಾ ತಂಡ ಎಸ್‌ಒ ಎಲ್ ಎಮಿರ್ನೆ ಕ್ಲಬ್ ವಿರುದ್ಧ 149-0 ಅಂತದ ಜಯ ಸಾಧಿಸಿರುವುದು ಈ ವರೆಗಿನ ದಾಖಲೆಯಾಗಿದೆ.