ಬ್ಯೂನಸ್ ಐರಿಸ್: ಮರಡೋನಾ ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಾಗಿರಬಹುದು ಎಂದು ಅವರ ವಕೀಲ ಮತ್ತು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿರವ ಹಿನ್ನೆಲೆ ಮರಡೋನಾ ಅವರ ಕುಟುಂಬದ ವೈದ್ಯರ ಮನೆ ಮತ್ತು ಕಚೇರಿಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಕೆಲವು ಪೊಲೀಸ್ ಅಧಿಕಾರಿಗಳು ಮರಡೋನಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ನರರೋಗ ತಜ್ಞ ಡಾ. ಲಿಯೋಪೋಲ್ಡೋ ಲ್ಯೂಕ್ ಅವರ ಮನೆ ಮತ್ತು ಕಚೇರಿ ಹಾಗೂ ಸುತ್ತಮುತ್ತ ತಪಾಸಣೆ ಮಾಡುತ್ತಿರುವುದನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಮರಡೋನಾ ಸಂಬಂಧಿಕರಿಂದ ತನಿಖಾಧಿಕಾರಿಗಳು ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ಸ್ಯಾನ್ ಐಸಿಡ್ರೋ ಪ್ರಾಸಿಕ್ಯೂಟರ್ ಕಚೇರಿ ಪ್ರಕಟಣೆ ಹೊರಡಿಸಿದೆ. ಮರಡೋನಾ ವೈದ್ಯಕೀಯ ದಾಖಲೆಗಳನ್ನು ಪಡೆದು ಭದ್ರವಾಗಿಡಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ದಿಗ್ಗಜ ಫುಟ್ಬಾಲ್ ಆಟಗಾರನ ಸಾವಿನ ಹಿಂದೆ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿ ಬಂದಿರುವ ಕಾರಣ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಗುರುವಾರ ಮರಡೋನಾ ಅವರ ಅಂತ್ಯ ಸಂಸ್ಕಾರ ನಡೆದಿದ್ದು, ಕೇವಲ 12 ಮಂದಿ ಮಾತ್ರ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.