ಲೀಡ್ಸ್: ಈಜಿಪ್ಟ್ನ 75 ವರ್ಷದ ಎಜ್ ಎಲ್ ದಿನ್ ಬಹಡೆರ್ ಎಂಬಾತ ಈಜಿಪ್ಟ್ನ ತೃತೀಯ ವಿಭಾಗದ ಫುಟ್ಬಾಲ್ ಕ್ಲಬ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ವಿಶ್ವದ ಅತ್ಯಂತ ಹಿರಿಯ ವೃತ್ತಿಪರ ಫುಟ್ಬಾಲ್ ಆಟಗಾರ ಎಂಬ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.
ಈಜಿಪ್ಟ್ ಫುಟ್ಬಾಲ್ ಅಸೋಸಿಯೇಷನ್ ಅಕ್ಟೋಬರ್ 6 ರಂದು ಆಟಗಾರರ ಚಳಿಗಾಲದ ನೋಂದಣಿ ಕಾರ್ಯ ಆರಂಭಿಸಿದ್ದರು. ಈ ವೇಳೆ 75 ವರ್ಷದ ಬಹಡೆರ್ ತಮ್ಮ ಹೆಸರನ್ನು ನೋಂದಣಿ ಮಾಡಿಸಿಳ್ಳುವ ಮೂಲಕ ಫುಟ್ಬಾಲ್ ಇತಿಹಾಸದ ಅತ್ಯಂತ ಹಿರಿಯ ವೃತ್ತಿಪರ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದಾರೆ.
ಈಜಿಪ್ಟ್ ಫುಟ್ಬಾಲ್ ಫೆಡರೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ವಾಲಿದ್ ಅಲ್-ಅತ್ತರ್, ಕ್ಲಬ್ನ ಆಟಗಾರರು ಹಾಗೂ ಅಧಿಕಾರಿಗಳು ಬಹಡೆರ್ ಅವರನ್ನು ಕಛೇರಿಗೆ ಬಂದಾಗ ಅವರನ್ನು ಸ್ವಾಗತಿಸಿ ಅವರ ನೋಂದಣಿ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ.
75 ವರ್ಷದ ಬಹಡೆರ್ ಕ್ಲಬ್ ಪರ ಆಡುತ್ತಿದ್ದಂತೆ ಅವರ ಹೆಸರು ಗಿನ್ನೆಸ್ ದಾಖಲೆ ಪಟ್ಟಿಗೆ ಸೇರಲಿದೆ. ಇವರಿಗಿಂತ ಮೊದಲು ಇಸ್ರೇಲ್ನ ಇಸಾಕ್ ಹಾಯಿಕ್ ಎಂಬುವವರು ಅತ್ಯಂತ ಹಿರಿಯ ವೃತ್ತಿಪರ ಫುಟ್ಬಾಲ್ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಅವರು 2019ರಲ್ಲಿ ಇಸ್ರೇಲ್ನ ನಾಲ್ಕನೇ ಹಂತದ ಇರೋನಿ ಅಥವಾ ಯೆಹುದ ಎಂಬ ಕ್ಲಬ್ನಲ್ಲಿ ತಮ್ಮ 73 ವರ್ಷ ವಯಸ್ಸಿನಲ್ಲಿ ಫುಟ್ಬಾಲ್ ಪಂದ್ಯದಲ್ಲಿ ಆಡಿದ್ದರು.
ಇದೀಗ ಎಜ್ ಎಲ್ ದಿನ್ ಬಹಡರ್ 75ನೇ ವಯಸ್ಸಿನಲ್ಲಿ ಪುಟ್ಬಾಲ್ ಆಡುವ ಮೂಲಕ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರು ತಮ್ಮ ಕ್ಲಬ್ ಪರ ಎರಡು ಪೂರ್ಣ ಪಂದ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.