ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ವಿರುದ್ಧದ 3 ನೇ ಏಕದಿನ ಪಂದ್ಯವನ್ನೂ ಭಾರತ 4 ರನ್ಗಳಿಂದ ಸೋತು ಸರಣಿ ಕ್ಲೀನ್ಸ್ವೀಪ್ ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಬೌಲರ್ ದೀಪಕ್ ಚಹರ್ ಕೆಚ್ಚೆದೆಯ 34 ಎಸೆತಗಳಲ್ಲಿ 54 ರನ್ ಬಾರಿಸಿ ಆಫ್ರಿಕನ್ನರ ಬೆವರಿಳಿಸಿದ್ದರು. ದೀಪಕ್ ಚಹರ್ರ ಈ ಆಟಕ್ಕೆ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ದೀಪಕ್ ಚಹರ್ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ನಲ್ಲೂ ಮಿಂಚಿ ಭಾರತಕ್ಕೆ ನೆರವಾದರು. ಆದರೆ, ಈ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಕೈತಪ್ಪಿತು. ದೀಪಕ್ ತಂಡದ ಸಂಕಷ್ಟದ ಅವಧಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ಈ ಹಿಂದೆ ಭಾರತ ಎ ತಂಡದಲ್ಲಿದ್ದಾಗ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ದೀಪಕ್ ಆಲ್ರೌಂಡರ್ ಆಟವನ್ನು ನಾನು ನೋಡಿದ್ದೇನೆ' ಎಂದು ಗುಣಗಾನ ಮಾಡಿದ್ದಾರೆ.
ದೀಪಕ್ ಚಹರ್ ತಮಗೆ ಸಿಕ್ಕ ಅವಕಾಶದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಬೌಲಿಂಗ್ನಲ್ಲಿ 2 ವಿಕೆಟ್ ಪಡೆದರೆ, ತಂಡದ ಬ್ಯಾಟಿಂಗ್ ದಯನೀಯವಾಗಿ ಕುಸಿತ ಕಂಡಾಗ 54 ರನ್ ಚಚ್ಚಿ ತಂಡ ಹೀನಾಯ ಸೋಲು ಕಾಣುವುದನ್ನು ತಪ್ಪಿಸಿದರು. ದೀಪಕ್ ಬೌಲಿಂಗ್ ಅಲ್ಲದೇ ಬ್ಯಾಟಿಂಗ್ನಲ್ಲೂ ಮಿಂಚುತ್ತಿರುವುದು ಭಾರತ ತಂಡದ ಹೆಚ್ಚಿನ ಆಯ್ಕೆಯಾಗಿದ್ದಾರೆ ಎಂದರು.
ದೀಪಕ್ ಚಹರ್ ಜೊತೆಗೆ, ಶಾರ್ದೂಲ್ ಠಾಕೂರ್ ಕೂಡ ಕೆಳಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಚಾಕಚಕ್ಯತೆ ಹೊಂದಿದ್ದಾರೆ. ಇವರಿಬ್ಬರು ಭವಿಷ್ಯದಲ್ಲಿ ಭಾರತ ತಂಡದ ಅಗತ್ಯ ಆಟಗಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರಿಗೂ ಹೆಚ್ಚಿನ ಅವಕಾಶ ಸಿಗಲಿದೆ ಎಂದು ದ್ರಾವಿಡ್ ತಿಳಿಸಿದರು.
ಇದನ್ನೂ ಓದಿ: SA Vs IND: ಅಂತಿಮ ಪಂದ್ಯದಲ್ಲೂ 4 ರನ್ಗಳಿಂದ ಸೋತ ಭಾರತ.. ದ.ಆಫ್ರಿಕಾ ವಿರುದ್ಧ 3-0 ಸರಣಿ ಮುಖಭಂಗ