ಲಂಡನ್: ಉತ್ತಮ ಸ್ನೇಹಿತರಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಟಾಸ್ ವೇಳೆ ಹೆಜ್ಜೆಯಾಕುವುದು ತುಂಬಾ ಉಲ್ಲಾಸದಿಂದ ಕೂಡಿರಲಿದೆ ಎಂದು ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಭಿಪ್ರಾಯ ಪಟ್ಟಿದ್ದಾರೆ.
ಜೂನ್ 18ರಿಂದ 22ರವರೆಗೆ ಸೌತಾಂಪ್ಟನ್ನಲ್ಲಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಕೊಹ್ಲಿ ಮತ್ತು ವಿಲಿಯಮ್ಸನ್ ತಮ್ಮ ನಾಯಕತ್ವದಲ್ಲಿ ಈ ಐತಿಹಾಸಿಕ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ. ಭಾರತ ತಂಡದ ವಿಶ್ವದರ್ಜೆಯ ಬೌಲಿಂಗ್ ದಾಳಿ ಎದುರಿಸುವುದು ಸುಲಭವಲ್ಲ ಎಂದು ತಿಳಿಸಿದ್ದಾರೆ.
ನಾವು ಹಲವಾರು ವಿಭಿನ್ನ ಹಂತಗಳಲ್ಲಿ ಮತ್ತು ಸ್ಪರ್ಧೆಗಳಲ್ಲಿ ಪರಸ್ಪರರ ವಿರುದ್ಧ ಆಡಿದ್ದೇವೆ. ನಾವು ಒಬ್ಬರನ್ನೊಬ್ಬರನ್ನು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದೇವೆ. ಹಾಗಾಗಿ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ವೇಳೆ ಟಾಸ್ಗಾಗಿ ಜೊತೆಯಾಗಿ ಹೆಜ್ಜೆಯಾಕುವುದಕ್ಕೆ ತುಂಬಾ ಹರ್ಷವಿದೆ ಎಂದು ಐಸಿಸಿ ವೆಬ್ಸೈಟ್ ಜೊತೆ ಮಾತನಾಡುವಾಗ ವಿಲಿಯಮ್ಸನ್ ಹೇಳಿದ್ದಾರೆ.
ಇದನ್ನು ಓದಿ:ಮನಸ್ಥಿತಿ ಚೆನ್ನಾಗಿದ್ದರೆ ಎಲ್ಲವೂ ಸರಿಹೋಗುತ್ತದೆ: ತಂಡದ ಸಾಮರ್ಥ್ಯದ ಬಗ್ಗೆ ಕೊಹ್ಲಿ ವಿವರಣೆ
ಈ ಜೋಡಿ 2008ರ ಅಂಡರ್ 19 ವಿಶ್ವಕಪ್ ಫೈನಲ್ ವೇಳೆ ನಾಯಕರಾಗಿ ಎದುರಾಗಿದ್ದರು. ನಂತರ 2019ರ 50 ಓವರ್ಗಳ ವಿಶ್ವಕಪ್ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಿದ್ದರು. ಇದೀಗ ಮತ್ತೊಂದು ಪ್ರಮುಖ ಟೂರ್ನಿಯಲ್ಲಿ ನಾಯಕರಾಗಿ ಒಬ್ಬರನ್ನೊಬ್ಬರು ಎದುರಿಸಲು ಸಜ್ಜಾಗಿದ್ದಾರೆ.
ಭಾರತದ ಬೌಲಿಂಗ್ ಆಳ ಮತ್ತು ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ಐತಿಹಾಸಿಕ ಸರಣಿ ಗೆಲುವಿನ ಬಗ್ಗೆ ತನಗೆ ಚೆನ್ನಾಗಿ ತಿಳಿದಿದೆ ಎಂದು ವಿಲಿಯಮ್ಸನ್ ಹೇಳಿದ್ದಾರೆ.
ಹೌದು, ಅವರು ಅತ್ಯುತ್ತಮವಾದ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ. ಅದ್ಭುತವಾದ ತಂಡ, ಆಸ್ಟ್ರೇಲಿಯಾ ವಿರುದ್ಧದ ಸರಣಿಯುದ್ದಕ್ಕೂ ನಾವು ಅದನ್ನು ಚೆನ್ನಾಗಿ ನೋಡಿದ್ದೇವೆ. ವೇಗದ ಬೌಲಿಂಗ್ ಮತ್ತು ಸ್ಪಿನ್ನ ಬೌಲಿಂಗ್ ಬಲಿಷ್ಠವಾಗಿದೆ. ಜೊತೆಗೆ ಅಗ್ರಸ್ಥಾನದಲ್ಲಿರುವ ತಂಡ . ಆದ್ದರಿಂದ ಫೈನಲ್ನಲ್ಲಿ ಇಂತಹ ತಂಡದ ವಿರುದ್ಧ ಆಡುವುದಕ್ಕೆ ನಮಗೆ ಅತ್ಯಾಕರ್ಷಕ ಅವಕಾಶ ಸಿಕ್ಕಿದೆ ಎಂದು ನ್ಯೂಜಿಲ್ಯಾಂಡ್ ನಾಯಕ ಹೇಳಿದ್ದಾರೆ.