ಬೆಂಗಳೂರು: ಬಾಬರ್ ಆ್ಯಂಡ್ ಟೀಂ ಅಹಮದಾಬಾದ್ನಲ್ಲಿ ಹೀನಾಯ ಸೋಲುಕಂಡ ನಂತರ ಭಾನುವಾರ ಬೆಂಗಳೂರಿಗೆ ಬಂದು ತಲುಪಿತು. ಸಿಲಿಕಾನ್ ಸಿಟಿಗೆ ಆಗಮಿಸಿದ ಆಟಗಾರರು ಹವಾಮಾನ ವೈಪರೀತ್ಯದಿಂದ ಜ್ವರಕ್ಕೆ ತುತ್ತಾಗಿದ್ದಾರೆ. ಹಸಿರು ಜರ್ಸಿಯ ಆಟಗಾರರಲ್ಲಿ ಕೆಲವರು ಚೇತರಿಸಿಕೊಂಡಿದ್ದು, ಇನ್ನೂ ಕೆಲವರು ವೈದ್ಯಕೀಯ ನಿಗಾದಲ್ಲಿದ್ದಾರೆ.
ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಮೂರರಲ್ಲಿ ಎರಡು ಪಂದ್ಯ ಗೆದ್ದುಕೊಂಡಿದ್ದು, ಭಾರತದ ವಿರುದ್ಧ ಮಾತ್ರ ಸೋಲುಂಡಿದೆ. ಶುಕ್ರವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡ ಆಸ್ಟ್ರೇಲಿಯಾವನ್ನು ಎದುರಿಸಬೇಕಿದೆ. ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ ತನ್ನ ಚೊಚ್ಚಲ ಗೆಲುವು ದಾಖಲಿಸಿತು. ಆಸ್ಟ್ರೇಲಿಯಾಕ್ಕೆ ಪಾಕ್ ವಿರುದ್ಧದ ಪಂದ್ಯ ಗೆಲ್ಲಲೇಬೇಕಾದ ಒತ್ತಡವಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಧ್ಯಮ ವ್ಯವಸ್ಥಾಪಕ, ಅಹ್ಸಾನ್ ಇಫ್ತಿಕರ್ ನಾಗಿ ಆಟಗಾರರ ಅರೋಗ್ಯದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. "ಕೆಲವು ಆಟಗಾರರು ಕಳೆದ ಕೆಲವು ದಿನಗಳಲ್ಲಿ ಜ್ವರದಿಂದ ಬಳಲುತ್ತಿದ್ದರು. ಅವರಲ್ಲಿ ಹೆಚ್ಚಿನವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಹಂತದಲ್ಲಿರುವವರು ವೈದ್ಯಕೀಯ ನಿಗಾದಲ್ಲಿದ್ದಾರೆ. ಇನ್ನೂ ಕೆಲವರು ವೈದ್ಯಕೀಯ ಸಮಿತಿಯ ಅವಲೋಕನದಲ್ಲಿದ್ದಾರೆ" ಎಂದರು. ತಂಡದ ಸ್ಟಾರ್ ಆಟಗಾರರಾದ ನಾಯಕ ಬಾಬರ್ ಅಜಮ್ ಮತ್ತು ವೇಗಿ ಶಾಹೀನ್ ಅಫ್ರಿದಿ ಚೇತರಿಸಿಕೊಂಡಿದ್ದು, ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ.
ಟಿಕೆಟ್ ಮಾರಾಟ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿರುವ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ 4 ಪಂದ್ಯಗಳ ಟಿಕೆಟ್ ಮಾರಾಟದ ದಿನಾಂಕವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. ಆತಿಥೇಯ ಭಾರತ ಹಾಗೂ ನೆದರ್ಲೆಂಡ್ ನಡುವಿನ ಪಂದ್ಯ ಹೊರತುಪಡಿಸಿ ಉಳಿದ ಮೂರು ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಪಡೆಯಲು ಕ್ರೀಡಾಂಗಣದ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಮಂಗಳವಾರ, ಬುಧವಾರ ಹಾಗೂ ಗುರುವಾರ ಕ್ರೀಡಾಂಗಣದ ನಾಲ್ಕು ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ನಡೆಯಲಿದೆ. ಅಕ್ಟೋಬರ್ 20 ರಂದು ನಡೆಯಲಿರುವ ಆಸ್ಟ್ರೇಲಿಯಾ-ಪಾಕಿಸ್ತಾನ, 26 ರಂದು ನಡೆಯಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಹಾಗೂ ನವೆಂಬರ್ 4ರಂದು ನಡೆಯಲಿರುವ ನ್ಯೂಜಿಲೆಂಡ್- ಪಾಕಿಸ್ತಾನ ಹಾಗೂ ನವೆಂಬರ್ 9ರಂದು ನಡೆಯಲಿರುವ ನ್ಯೂಜಿಲೆಂಡ್- ಶ್ರೀಲಂಕಾ ನಡುವಿನ ಪಂದ್ಯಗಳ ಟಿಕೆಟ್ ಮಾರಾಟ ಮಾಡಲಾಗುವುದು ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಹ್ಯಾಟ್ರಿಕ್ ಜಯ ದಾಖಲಿಸಿದ ಭಾರತಕ್ಕೆ ಪುಣೆಯಲ್ಲಿ ಬಾಂಗ್ಲಾ ಸವಾಲು.. ಈ ಆಟಗಾರರ ಮೇಲಿದೆ ಎಲ್ಲರ ಕಣ್ಣು!