ಹೈದರಾಬಾದ್: ಫಿಟ್ನೆಸ್ ಕಾರಣದಿಂದಾಗಿ ವಿಶ್ವಕಪ್ ಕ್ರಿಕೆಟ್‌ನ ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಾಂಗ್ಲಾದೇಶ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದ ವಿಲಿಯಮ್ಸನ್ ಫೀಲ್ಡಿಂಗ್ಗೆ ಲಭ್ಯವಿರಲಿಲ್ಲ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನೆದರ್ಲೆಂಡ್ ವಿರುದ್ಧದ ಪಂದ್ಯಗಳಿಂದ ಸಂಪೂರ್ಣವಾಗಿ ಅವರು ಹೊರಗುಳಿದಿದ್ದರು.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಲಿಯಮ್ಸನ್, "ನನ್ನ ಗಾಯದ ಬಳಿಕ ಇದೊಂದು ಸುದೀರ್ಘ ಪ್ರಯಾಣವಾಗಿತ್ತು. ವಿಶ್ವಕಪ್ ತಂಡಕ್ಕೆ ಮರಳಲು ಕಾತರದಿಂದ ಎದುರು ನೋಡುತ್ತಿದ್ದೇನೆ. ಮುಂದಿನ ಪಂದ್ಯವನ್ನಾಡಲು ಬಹಳ ಉತ್ಸುಕನಾಗಿದ್ದೇನೆ. ಟಿಮ್ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ತಿಳಿಸಿದರು.
2023ರ 16ನೇ ಆವೃತ್ತಿಯ ಐಪಿಎಲ್ ವೇಳೆ ಗಾಯಗೊಂಡಿದ್ದ ವಿಲಿಯಮ್ಸನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಏತನ್ಮಧ್ಯೆ ನಾಯಕನ ಅನುಪಸ್ಥಿತಿಯ ನಡುವೆಯೂ ಟಾಮ್ ಲ್ಯಾಥಮ್ ನೇತೃತ್ವದ ತಂಡ ಆರಂಭಿಕ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಮುಂದಿನ ಪಂದ್ಯಕ್ಕೂ ಸೌಥಿ ಅಲಭ್ಯ: ತಂಡಕ್ಕೆ ಅನುಭವಿ ಆಟಗಾರ, ವೇಗಿ ಟೀಮ್ ಸೌಥಿ ಅನುಪಸ್ಥಿತಿ ಮುಂದುವರೆಯಲಿದೆ. ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲಿ ಹೆಬ್ಬೆರಳ ಗಾಯಕ್ಕೆ ತುತ್ತಾಗಿರುವ ವೇಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಬಾಂಗ್ಲಾ ಪಂದ್ಯಕ್ಕೂ ಅವರ ಅಲಭ್ಯತೆ ಕಾಡಲಿದೆ.
ಚೆನ್ನೈನ ಎಂ.ಚಿದಾಂಬರಂ ಮೈದಾನದಲ್ಲಿ ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್ ತನ್ನ ಮೂರನೇ ಪಂದ್ಯ ಆಡಲಿದೆ. ನಾಯಕ ಶಕೀಬ್ ಅಲ್ ಹಸನ್ ನೇತೃತ್ವದ ತಂಡವನ್ನು ಮಣಿಸಿ ಅಗ್ರಸ್ಥಾನದ ಓಟ ಮುಂದುವರೆಸಲು ಕಿವೀಸ್ ಯೋಜನೆ ರೂಪಿಸಿದೆ. ಮತ್ತೊಂದೆಡೆ, ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿರುವ ಬಾಂಗ್ಲಾ ಪುಟಿದೇಳಲು ಹವಣಿಸುತ್ತಿದೆ.
ವಿಲಿಯಮ್ಸನ್ ODI ರೆಕಾರ್ಡ್ಸ್: ಕೇನ್ ವಿಲಿಯಮ್ಸನ್ 2019ರ ಏಕದಿನ ವಿಶ್ವಕಪ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದರು. ಉತ್ತಮ ನಿರ್ವಹಣೆ ತೋರಿದ್ದ ಅವರು ಫೈನಲ್ ಹಂತದವರೆಗೂ ತಂಡವನ್ನು ಕೊಂಡೊಯ್ದಿದ್ದರು. ಸೂಪರ್ ಓವರ್ನಲ್ಲೂ ಪಂದ್ಯ ಡ್ರಾ ಕಂಡ ಹಿನ್ನೆಲೆಯಲ್ಲಿ ಬೌಂಡರಿ ಎಣಿಕೆಯ ಆಧಾರದ ಮೇಲೆ ಇಂಗ್ಲೆಂಡ್ ಅನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು. ಕೇನ್ ವಿಲಿಯಮ್ಸನ್ ಈವರೆಗೂ 161 ಏಕದಿನ ಪಂದ್ಯಗಳನ್ನಾಡಿದ್ದು 6,554 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕಗಳು ಮತ್ತು 42 ಅರ್ಧ ಶತಕ ಒಳಗೊಂಡಿವೆ. ಅವರ ಗರಿಷ್ಠ ಸ್ಕೋರ್ 148 ಆಗಿದೆ. ಕೇನ್ 2010ರಲ್ಲಿ ಡಂಬುಲ್ಲಾದಲ್ಲಿ ಭಾರತದ ವಿರುದ್ಧ ತಮ್ಮ ಏಕದಿನ ಚೊಚ್ಚಲ ಪಂದ್ಯ ಆಡಿದ್ದರು.
ಇದನ್ನೂ ಓದಿ: ತನ್ನ ದಾಖಲೆ ಪುಡಿಗಟ್ಟಿದ ರೋ'ಹಿಟ್' ಶರ್ಮಾಗೆ '45 ಸ್ಪೆಷಲ್' ಎಂದು ಅಭಿನಂದಿಸಿದ ಕ್ರಿಸ್ ಗೇಲ್