ಚೆನ್ನೈ (ತಮಿಳುನಾಡು): 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ತಂಡಕ್ಕೆ ಯಾವುದೇ ಐಸಿಸಿ ಟ್ರೋಫಿ ಒಲಿಯಲಿಲ್ಲ. 2023 ವಿಶ್ವಕಪ್ ತವರಿನಲ್ಲಿ ನಡೆಯುತ್ತಿದೆ ಎಂಬ ಕಾರಣಕ್ಕೆ ಭಾರತ ಗೆಲ್ಲುತ್ತದೆ ಎಂದು ಆರಂಭದಲ್ಲಿ ವಿಶ್ವಾಸದಲ್ಲಿದ್ದ ಅಭಿಮಾನಿಗಳು ಈಗ ತಂಡದ ಪ್ರದರ್ಶನ ನೋಡಿ ಇದು ನಮಗೇ ಸಿಗಬೇಕಾದದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ. ಏಕೆಂದರೆ, ವಿಶ್ವಕಪ್ ಲೀಗ್ ಹಂತದ 9 ಪಂದ್ಯಗಳಲ್ಲಿ ಲೀಲಾಜಾಲವಾಗಿ ಗೆದ್ದಿದ್ದಲ್ಲದೇ, 2019ರ ಸೆಮೀಸ್ನಲ್ಲಿ ಮಣಿಸಿದ ಕಿವೀಸ್ ತಂಡವನ್ನು ಮನೆಗೆ ಕಳುಹಿಸಿ ಈ ಬಾರಿ ರೋಹಿತ್ ಶರ್ಮಾ ಪಡೆ ಅಂತಿಮ ಘಟ್ಟ ತಲುಪಿದೆ.
ಭಾರತ ತಂಡದ ಈ ಪ್ರದರ್ಶನವನ್ನು ಕಂಡ ಮಾಜಿ ಕೋಚ್ ರವಿಶಾಸ್ತ್ರಿ ಸಹ ಭಾರತ ಪಂದ್ಯವನ್ನು ಗೆಲ್ಲುವ ನೆಚ್ಚಿನ ಮತ್ತು ಅರ್ಹ ತಂಡ ಎಂದಿದ್ದಾರೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾರತ - ಆಸ್ಟ್ರೇಲಿಯಾ ಪಂದ್ಯದ ಕುರಿತು ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವಿವರಣೆಗಾರ ರವಿಶಾಸ್ತ್ರಿ ಶುಕ್ರವಾರ ತಮ್ಮ ಅಭಿಪ್ರಾಯವನ್ನು ಚೆನ್ನೈನಲ್ಲಿ ಹೇಳಿದ್ದಾರೆ. "ಆಸ್ಟ್ರೇಲಿಯಾ ವಿರುದ್ಧದ ಘರ್ಷಣೆಯಲ್ಲಿ ಭಾರತವು ಫೇವರಿಟ್ ಆಗಿರುತ್ತದೆ. ಭಾರತ ತಂಡ ಬೇರೆ ಏನನ್ನೂ ಮಾಡಬೇಕಾಗಿಲ್ಲ, ಕೊನೆಯ ಎರಡು ಪಂದ್ಯಗಳಲ್ಲಿ ಮಾಡುತ್ತಿರುವುದನ್ನು ಮುಂದುವರಿಸಬೇಕು. ತಂಡವು ಸಂಘಟಿತವಾಗಿ, ಶಾಂತವಾಗಿ ಒತ್ತಡವನ್ನು ನಿಭಾಯಿಸಿದರೆ ಸಾಕು" ಎಂದಿದ್ದಾರೆ.
ವಿಶ್ವಕಪ್ಗೂ ಎರಡು ತಿಂಗಳ ಮೊದಲು ಭಾರತದ ಮಧ್ಯಮ ಕ್ರಮಾಂಕದ ತಲೆನೋವಿಗೆ ಸಂಪೂರ್ಣ ಪರಿಹಾರ ಸಿಕ್ಕಿದೆ. ಅಲ್ಲದೇ ಭಾರತ ಎಲ್ಲಾ ವಿಭಾಗದಲ್ಲೂ ಭರ್ಜರಿ ಪ್ರದರ್ಶನ ನೀಡುತ್ತಿದೆ. "ತಂಡದ ಪ್ರತಿಯೊಬ್ಬರೂ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಉತ್ತಮ ಸಂಕೇತವಾಗಿದೆ" ಎಂದು ಶಾಸ್ತ್ರಿ ಹೇಳಿದ್ದಾರೆ.
ಪುಟಿದೆದ್ದ ಆಸಿಸ್: 5 ಬಾರಿ ವಿಶ್ವಕಪ್ ಗೆದ್ದಿರುವ ಕಾಂಗರೂ ಪಡೆ ಈ ಬಾರಿ ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಭಾರತಕ್ಕೆ ಬಂದಿದೆ. 2003ರ ವಿಶ್ವಕಪ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಇದೇ ಹಂತದಲ್ಲಿ ಮುಖಾಮುಖಿ ಆಗಿತ್ತು. ಅಂದು ಭಾರತ ತಂಡವನ್ನು ಆಸ್ಟ್ರೇಲಿಯಾ ಸೋಲಿಸಿತ್ತು. 20 ವರ್ಷಗಳ ಹಿಂದಿನ ಈ ಹಗೆಯನ್ನು ಟೀಮ್ ಇಂಡಿಯಾ ತೀರಿಸಬೇಕಿದೆ. ವಿಶ್ವಕಪ್ ಆರಂಭವಾದಾಗ ಕಳಪೆ ಪ್ರದರ್ಶನ ನೀಡಿ ಎರಡು ಪಂದ್ಯವನ್ನು ಕಳೆದುಕೊಂಡ ಆಸ್ಟ್ರೇಲಿಯಾ ನಂತರ ಪುಟಿದೆದ್ದಿತು. ಸತತ ಎಂಟು ಪಂದ್ಯಗಳನ್ನು ಗೆದ್ದು ಈಗ ಫೈನಲ್ ಪ್ರವೇಶ ಪಡೆದುಕೊಂಡಿದೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್ಗಳು ಯಾರೆಂದು ಗೊತ್ತಾ?