ಕ್ರೈಸ್ಟ್ ಚರ್ಚ್, ನ್ಯೂಜಿಲ್ಯಾಂಡ್ : ಐಸಿಸಿ ಏಕದಿನ ಮಹಿಳಾ ವಿಶ್ವಕಪ್ನಲ್ಲಿ ದಕ್ಷಿಣಾಫ್ರಿಕಾ ತಂಡದ ವಿರುದ್ಧ ಭಾರತೀಯ ವನಿತೆಯರ ತಂಡ ವಿರೋಚಿತ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ವನಿತೆಯ ತಂಡ 50 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಮೂರು ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಭಾರತದ ಸೆಮಿಫೈನಲ್ ಕನಸು ನುಚ್ಚುನೂರಾಗಿದೆ.
ಭಾರತದ ಪರ ಮೂವರು ಅರ್ಧಶತಕ ಗಳಿಸಿದ್ದು,ವ್ಯರ್ಥವಾಗಿದೆ. ಸ್ಮೃತಿ ಮಂಧಾನ 71, ಶೆಫಾಲಿ ವರ್ಮಾ 53 ಮತ್ತು ಮಿಥಾಲಿ ರಾಜ್ 68 ರನ್ ಗಳಿಸಿದ್ದು, ಹರ್ಮನ್ಪ್ರೀತ್ ಕೌರ್ 48 ರನ್ ಗಳಿಸಿದರು. ದಕ್ಷಿಣಾಫ್ರಿಕಾ ಪರ ಲೌರಾ ವೊಲ್ವಾರ್ಡ್ತ್ 80, ಮಿಗ್ನೋನ್ ದು ಪ್ರೀಜ್ 52, ಲಾರಾ ಗುಡಾಲ್ 49 ರನ್ ಗಳಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತ ತಂಡದ ರಾಜೇಶ್ವರಿ ಗಾಯಕ್ವಾಡ್ ಮತ್ತು ಹರ್ಮನ್ ಪ್ರೀತ್ ಕೌರ್ ತಲಾ ಎರಡು ವಿಕೆಟ್ ಪಡೆದಿದ್ದು, ಇನ್ನು ಮೂರು ವಿಕೆಟ್ಗಳನ್ನು ರನ್ಔಟ್ ಮೂಲಕ ಗಳಿಸಲಾಗಿದೆ. ದಕ್ಷಿಣಾಫ್ರಿಕಾ ಬೌಲಿಂಗ್ನಲ್ಲಿ ಶಬ್ನಿಮ್ ಇಸ್ಮೇಲ್, ಮಸಾಬಟ ಕ್ಲಾಸ್ ತಲಾ ಎರಡು ವಿಕೆಟ್, ಅಯಬೊಂಗಾ ಕಾಪ್ಪ್, ಕ್ಲೊ ಟ್ರೈಯಾನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.