ಮುಂಬೈ: ಭುಜದ ಗಾಯಕ್ಕೆ ಒಳಗಾಗಿರುವ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮುಂದಿನ ಎರಡು ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಬೇಕಾಗಿದೆ.
ಭಾರತ ವಿರುದ್ಧದ ಕಾನ್ಪುರದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ವೇಳೆ ವಿಲಿಯಮ್ಸನ್ ಭುಜದ ಗಾಯಕ್ಕೆ ಒಳಗಾಗಿದ್ದರು. ಈ ಕಾರಣದಿಂದ ಅವರು ಮುಂಬೈನಲ್ಲಿ ನಡೆದಿದ್ದ 2ನೇ ಟೆಸ್ಟ್ ನಿಂದ ಹೊರಬಿದ್ದಿದ್ದರು. ಪರಿಣಾಮ ಕಿವೀಸ್ 372 ರನ್ಗಳ ಹೀನಾಯ ಸೋಲು ಕಂಡಿತ್ತು.
"ಕೇನ್ಸ್ ಸರಿ ಹೋಗುತ್ತಿದ್ದಾರೆ. ಈ ಹಿಂದೆಯೂ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಂತರ ಮತ್ತು ಐಪಿಎಲ್ ಹಾಗೂ ಟಿ20 ವಿಶ್ವಕಪ್ಗೂ ಮೊದಲು ಸುಮಾರು 8 ವಾರಗಳು ಅವರು ಇದೇ ಸಮಸ್ಯೆ ಎದುರಿಸಿದ್ದರು. ನಾವು ಅವರಿಗೆ ಚೇತರಿಸಿಕೊಳ್ಳಲು ಯಾವುದೇ ಸಮಯದ ಚೌಕಟ್ಟುಗಳನ್ನು ಹಾಕದಿರಲು ಪ್ರಯತ್ನಿಸುತ್ತೇವೆ.
ಅವರಿಗೆ ಸರ್ಜರಿ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಪುನಶ್ಚೇತನದ ನಂತರ ಅಗತ್ಯವಿದ್ದರೆ ಸರ್ಜರಿ ಮಾಡಬಹುದು. ನಾನು ಹೀಗೆ ಹೇಳುತ್ತಿದ್ದೇನೆಂದು ತಪ್ಪಾಗಿ ಭಾವಿಸಬೇಡಿ. ಒಂದು ವೇಳೆ ಸ್ನಾಯುರಜ್ಜನ್ನು ಕತ್ತರಿಸುವ ಅಗತ್ಯವಿಲ್ಲದಿದ್ದರೆ ಸರ್ಜರಿ ಮಾಡಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಏಕೆಂದರೆ ಅದು ಕೇನ್ಗೆ ತುಂಬಾ ಕಠಿಣ ಪರಿಸ್ಥಿತಿಗೆ ತಳ್ಳಲಿದೆ. ಅವರು ನ್ಯೂಜಿಲ್ಯಾಂಡ್ ಪರ ಆಡುವುದಕ್ಕೆ ಪ್ರೀತಿಸುತ್ತಾರೆ. ಅವರೂ ದೇಶದ ಪರ ಆಡುವುದನ್ನ ತಪ್ಪಿಸಿಕೊಳ್ಳುವುದನ್ನ ತುಂಬಾ ದ್ವೇಷಿಸುತ್ತಾರೆ" ಎಂದು ನ್ಯೂಜಿಲ್ಯಾಂಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯವನ್ನಾಡಲಿದೆ. ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಮತ್ತು ಒಂದು ಟಿ20 ಪಂದ್ಯವನ್ನಾಡಲಿದೆ.
ಇದನ್ನೂ ಓದಿ:ಭಾರತ ಇಲ್ಲದಿದ್ದರೆ ನನ್ನ ಬ್ರ್ಯಾಂಡ್ ಈಗಿರುವ ಅರ್ಧದಷ್ಟೂ ಇರುತ್ತಿರಲಿಲ್ಲ: ಡ್ವೇನ್ ಬ್ರಾವೋ