ಸೆಂಚುರಿಯನ್(ದಕ್ಷಿಣ ಆಫ್ರಿಕಾ) : ನಿರಂತರ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ಅನುಭವಿಗಳಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಪರ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಬೆಂಬಲ ವ್ಯಕ್ತಪಡಿಸಿದ್ದು, ಅವರ ವಿಚಾರದಲ್ಲಿ ತಾಳ್ಮೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅಜಿಂಕ್ಯ ರಹಾನೆ ಕ್ರಮವಾಗಿ 48 ಮತ್ತು 20 ರನ್ ಮತ್ತು ಚೇತೇಶ್ವರ್ ಪೂಜಾರ 0 ಮತ್ತು 16 ರನ್‌ಗಳಿಗೆ ಔಟ್ ಆಗಿದ್ದರು.
"ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ರನ್ಗಳಿಸಲು ಸಾಧ್ಯವಾದಷ್ಟು ಗರಿಷ್ಠ ಪ್ರಯತ್ನವನ್ನು ಹಾಕುತ್ತಿದ್ದಾರೆ. ಹಾಗಾಗಿ ಅವರಿಬ್ಬರ ಬಗ್ಗೆ ನಮಗೆ ಕಾಳಜಿ ಇದೆ. ಅಜಿಂಕ್ಯ ರಹಾನೆ ಮೊದಲ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆದರೆ, ಅನಿರೀಕ್ಷಿತವಾಗಿ ವಿಕೆಟ್ ಒಪ್ಪಿಸಿದ್ದರು. ಪೂಜಾರಗೂ ಕೂಡ ಇದೇ ರೀತಿಯಾಗಿದೆ." ಎಂದು ವಿಕ್ರಮ್ ರಾಥೋಡ್ ನಾಲ್ಕನೇ ದಿನದಾಟದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
" ಚೇತೇಶ್ವರ್ ಪೂಜಾರ ನಮೆಗೆ ಕೆಲವು ಮಹತ್ವದ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇವೆಲ್ಲವೂ ಸವಾಲಿನ ಪರಿಸ್ಥಿತಿಗಳೆಂದು ನೀವು ನೋಡಿದ್ದೀರಿ, ಇಲ್ಲಿ ಹೆಚ್ಚು ಬ್ಯಾಟರ್ಗಳು ರನ್ಗಳಿಸಲು ಆಗುವುದಿಲ್ಲ. ಅವರಿಬ್ಬರು ಅತ್ಯುತ್ತಮವಾದದ್ದನ್ನು ನೀಡುವ ಪ್ರಯತ್ನದಲ್ಲಿದ್ದಾರೆ, ಆದ್ದರಿಂದ ನಾವು ಅವರಿಬ್ಬರ ವಿಚಾರದಲ್ಲಿ ಸಾಧ್ಯವಾದಷ್ಟು ತಾಳ್ಮೆಯಿಂದ ಇರಬೇಕಾದ ಅಗತ್ಯವಿದೆ. ಕೋಚಿಂಗ್ ಸಿಬ್ಬಂದಿಯಾಗಿ ನಾವು ನಮ್ಮ ಕಡೆಯಿಂದ ಉತ್ತಮವಾದುದನ್ನು ನೀಡುತ್ತಿದ್ದೇವೆ. ಈ ಹಂತದಲ್ಲಿ ತಾಳ್ಮೆ ಕಳೆದುಕೊಳ್ಳುವುದೇ? ಈ ಹಂತದಲ್ಲಿ ಅದು ಸರಿಯಲ್ಲ ಎಂದು ಭಾವಿಸುತ್ತೇನೆ." ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಿವೀಸ್ ಸ್ಟಾರ್ ರಾಸ್ ಟೇಲರ್ ವಿದಾಯ