ಅಹಮದಾಬಾದ್(ಗುಜರಾತ್): 2022ರಲ್ಲಿ ನಡೆದ ಟಿ-20 ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಎದುರು ಭಾರತ ಸೋಲಿನ ಕಹಿ ಕಂಡಿತ್ತು. ಅಂಥ ಸಂದರ್ಭದಲ್ಲೂ ಕೋಚ್ ರಾಹುಲ್ ದ್ರಾವಿಡ್ ಅವರು ನಮ್ಮ ಬೆನ್ನ ಹಿಂದೆ ಬಂಡೆಯಂತೆ ನಿಂತರು. ಅವರಿಗಾಗಿ ಈ ಬಾರಿಯ ವಿಶ್ವಕಪ್ ಗೆಲ್ಲುತ್ತೇವೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಇಂದು ಅಹಮದಾಬಾದ್ನ ಮೊಟೇರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ, ಭಾರತೀಯ ಕ್ರಿಕೆಟ್ಗೆ ರಾಹುಲ್ ದ್ರಾವಿಡ್ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಟಿ-20 ವಿಶ್ವಕಪ್ ಲೀಗ್ ಪಂದ್ಯದಿಂದ ಸೆಮಿಫೈನಲ್‌ವರೆಗೂ ಉತ್ತಮ ರನ್ ಗಳಿಸಿದ್ದರೂ, ನಾವು ಇಂಗ್ಲೆಂಡ್ ವಿರುದ್ಧ ಸೋಲಬೇಕಾಯಿತು. ಇಂತಹ ಸಂಕಷ್ಟದ ಸಮಯದಲ್ಲಿ ಆಟಗಾರರ ಪರ ದ್ರಾವಿಡ್ ನಿಂತಿದ್ದರು. ಹೀಗಾಗಿ ಅವರಿಗಾಗಿ ನಾವು ಚೆನ್ನಾಗಿ ಆಡುವ ಮೂಲಕ ಕಪ್ ಗೆದ್ದು ಗೌರವ ನೀಡಬೇಕಿದೆ ಎಂದರು.
ದ್ರಾವಿಡ್ ತಮ್ಮ ಆಲೋಚನೆ ಮತ್ತು ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದಾರೆ. ತಂಡದಲ್ಲಿ ಸ್ಪಷ್ಟತೆ ತರುವಲ್ಲಿ ದ್ರಾವಿಡ್ ಪಾತ್ರ ದೊಡ್ಡದು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕೋಚ್ ಒಪ್ಪದೇ ಇರಬಹುದು, ಅದು ಬೇರೆ ಮಾತು. ಈ ದಿನಗಳಲ್ಲಿ ನಾನು ಹೇಗೆ ಆಡುತ್ತಿದ್ದೇನೆ ಎಂಬುದನ್ನೂ ಸ್ಪಷ್ಟವಾಗಿ ರಾಹುಲ್ ಭಾಯ್ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಶಮಿ ಬಗ್ಗೆ ಪ್ರತಿಕ್ರಿಯೆ: ವಿಶ್ವಕಪ್ನ ಮೊದಲ ಕೆಲವು ಪಂದ್ಯಗಳಿಂದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಕೈಬಿಡಲಾಗಿತ್ತು. ಈ ಕುರಿತ ಪ್ರಶ್ನೆಗಳಿಗೆ ರೋಹಿತ್ ಶರ್ಮಾ ಉತ್ತರಿಸಿದರು. ಕೆಲವೊಮ್ಮೆ ತಂಡದ ಅಗತ್ಯತೆಗಳ ದೃಷ್ಟಿಯಿಂದ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶಮಿ ಒಬ್ಬ ಅದ್ಭುತ ಆಟಗಾರ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು ಕಣಕ್ಕಿಳಿದರು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಈಗಾಗಲೇ ವಿಶ್ವಕಪ್ನಲ್ಲಿ ಒಟ್ಟು 23 ವಿಕೆಟ್‌ಗಳನ್ನು ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಶ್ವಕಪ್ನಲ್ಲಿ ಬೌಲಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿದೆ: ರೋಹಿತ್ ಶರ್ಮಾ