ಪರ್ತ್ : ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಪರ್ತ್ ಸ್ಕಾರ್ಚರ್ಸ್ ಮಹಿಳಾ ತಂಡ 12 ರನ್ಗಳಿಂದ ಗೆದ್ದು2021ರ ವುಮೆನ್ಸ್ ಬಿಗ್ ಬ್ಯಾಶ್ ಲೀಗ್(WBBL) ಮುಡಿಗೇರಿಸಿಕೊಂಡಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸ್ಕಾರ್ಚರ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 146 ರನ್ಗಳಿಸಿತ್ತು. ನಾಯಕಿ ಸೂಫೀ ಡಿವೈನ್ 35, ಬೆತ್ ಮೂನಿ 19, ಮರಿಝಾನ್ ಕಾಪ್ 31 ಮತ್ತು ಹೀದರ್ ಗ್ರಹಂ 23 ರನ್ಗಳಿಸಿದ್ದರು.
147 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಅಡಿಲೇಡ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 134 ರನ್ಗಳಿಸಲಷ್ಟೇ ಶಕ್ತವಾಯಿತು. ಲೌರಾ ವಾಲ್ವಾರ್ಟ್ 25, ನಾಯಕಿ ತಹಿಲಾ ಮೆಕ್ಗ್ರಾತ್ 36, ಮೆಡಿಲಿನ್ ಪೆನ್ನಾ ಅಜೇಯ 30 ರನ್ಗಳಿಸಿ ಗೆಲುವಿಗಾಗಿ ಮಾಡಿದ ಪ್ರತಿರೋಧ ವ್ಯರ್ಥವಾಯಿತು.
ಕಠಿಣ ಬೌಲಿಂಗ್ ದಾಳಿ ನಡೆಸಿ ಪರ್ತ್ ಪರ ಟ್ಯಾನೀಲ್ ಪೆಶೇಲ್ 23ಕ್ಕೆ 2, ಹೀದರ್ ಗ್ರಹಂ 30ಕ್ಕೆ 2, ಸೋಫಿ ಡಿವೈನ್ 23ಕ್ಕೆ1 ಮತ್ತು ಕಾಪ್ 25ಕ್ಕೆ1 ವಿಕೆಟ್ ಪಡೆದು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.
ಮರಿಝಾನ್ ಕಾಪ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಮೆಲ್ಬೋರ್ನ್ ರೆನೆಗೇಡ್ಸ್ ಪರ ಅದ್ಭುತ ಆಲ್ರೌಂಡ್ ಪ್ರದರ್ಶನ ತೋರಿದ ಭಾರತದ ಹರ್ಮನ್ ಪ್ರೀತ್ ಕೌರ್ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ಪಾಕಿಸ್ತಾನದ ವಾಸೀಮ್ ಅಕ್ರಮ್, ಅಫ್ರಿದಿ ದಾಖಲೆ ಹಿಂದಿಕ್ಕಿದ ಅಶ್ವಿನ್