ಕೊಹ್ ಸಮುಯಿ (ಥಾಯ್ಲೆಂಡ್): ಆಸ್ಟ್ರೇಲಿಯಾ ಲೆಜೆಂಡರಿ ಕ್ರಿಕೆಟಿಗ ಶೇನ್ ವಾರ್ನ್ ಸಾವನ್ನಪ್ಪಿದ್ದ ವಿಲ್ಲಾವನ್ನು ಪರಿಶೀಲನೆ ನಡೆಸಿರುವ ಥಾಯ್ಲೆಂಡ್ ಪೊಲೀಸರು, ಅವರ ಕೊಠಡಿಯ ನೆಲ ಮತ್ತು ಅವರು ಬಳಸುತ್ತಿದ್ದ ಸ್ನಾನದ ಟವೆಲ್‌ಗಳಲ್ಲಿ ರಕ್ತದ ಕಲೆಗಳನ್ನು ಗುರುತಿಸಿದ್ದಾರೆ ಎಂದು ವರದಿಯಾಗಿವೆ.
52 ವರ್ಷದ ಕ್ರಿಕೆಟ್ ದಂತಕಥೆ ಥಾಯ್ನ ಐಷಾರಾಮಿ ವಿಲ್ಲಾದಲ್ಲಿ ಶುಕ್ರವಾರ ಹೃದಯಾಘಾತಕ್ಕೆ ಒಳಗಾಗಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸ್ನೇಹಿತರು ರಾತ್ರಿ ಥಾಯ್ ಇಂಟರ್ನ್ಯಾಷನಲ್ ಆಸ್ಪತ್ರೆಗೆ ದಾಖಲಿಸಿದ್ದರಾದರೂ, ಅಲ್ಲಿನ ವೈದ್ಯರು ವಾರ್ನ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರು.
ಭಾನುವಾರ ವಾರ್ನ್ ತಂಗಿದ್ದ ಕೊಠಡಿ ಪರಿಶೀಲನೆ ನಡೆಸಿದ ಥಾಯ್ ಪೊಲೀಸರಿಗೆ ಸ್ನಾನದ ಟವೆಲ್‌ಗಳಲ್ಲಿ ಮತ್ತು ನೆಲದ ಮೇಲೆ ರಕ್ತದ ಕಲೆಗಳು ಕಾಣಿಸಿರುವುದಾಗಿ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಆಸ್ಟ್ರೇಲಿಯಾದ ಸ್ಕೈನ್ಯೂಸ್ ವರದಿ ಮಾಡಿದೆ.
" ವಾರ್ನ್ ಅವರ ಕೋಣೆಯಲ್ಲಿ ದೊಡ್ಡ ಪ್ರಮಾಣದ ರಕ್ತ ಕಂಡುಬಂದಿವೆ. ಬಹುಶಃ ಸಿಪಿಆರ್ ಮಾಡಿದ ಸಂದರ್ಭದಲ್ಲಿ ರಕ್ತಸ್ರಾವವಾಗಿರಬಹುದು " ಎಂದು ಸ್ಥಳೀಯ ಪೊಲೀಸ್ ಕಮಾಂಡರ್ ಸತಿತ್ ಪೋಲ್ಪಿನಿಟ್ ಥಾಯ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಾರ್ನ್ ಇತ್ತೀಚೆಗೆ ಎದೆ ನೋವಿನ ಸಂಬಂಧ ವೈದ್ಯರನ್ನು ಭೇಟಿಯಾಗಿದ್ದರು ಎನ್ನುವುದು ತಿಳಿದುಬಂದಿರುವುದರಿಂದ ಅವರ ಸಾವನ್ನು ಅನುಮಾನಾಸ್ಪದ ಎಂದು ಪರಿಗಣಿಸಲಾಗದು ಎಂದು ಕೊಹ್ ಸಮುಯಿಯ ಬೋ ಫುಟ್ ಪೊಲೀಸ್ ಠಾಣೆಯ ಅಧೀಕ್ಷಕ ಯುಟ್ಟಾನಾ ಸಿರಿಸೊಂಬಾ ತಿಳಿಸಿದ್ದಾರೆ.
ಶೇನ್ ವಾರ್ನ್ ತನ್ನ ಸ್ನೇಹಿತರೊಂದಿಗೆ ಥಾಯ್ಲೆಂಡ್ ಕೊಲ್ಲಿಯಲ್ಲಿರುವ ಜನಪ್ರಿಯ ದ್ವೀಪವಾದ ಕೊಹ್ ಸಮುಯಿಗೆ ರಜೆ ನಿಮಿತ್ತ ಪ್ರವಾಸ ಕೈಗೊಂಡಿದ್ದರು. ಆದರೆ ಶುಕ್ರವಾರ ವಿಶ್ರಾಂತಿಯಲ್ಲಿದ್ದ ಅವರನ್ನು ಸಂಜೆ ಸುಮಾರು 5ರ ವೇಳೆ ಸ್ನೇಹಿತರೊಬ್ಬರು ಎಚ್ಚರಿಸಲು ಪ್ರಯತ್ನಿಸಿದಾಗ ವಾರ್ನ್ ಪ್ರತಿಕ್ರಿಯಿಸಿರಲಿಲ್ಲ. ಅವರು ತಕ್ಷಣ ಆ್ಯಂಬುಲೆನ್ಸ್‌ಗೆ ಕರೆಮಾಡಿ, ವಾರ್ನ್‌ಗೆ CPR ಅನ್ನು ಪ್ರಾರಂಭಿಸಿದ್ದರು. ಆದರೆ ಅವರು ಒಂದು ಗಂಟೆಯ ಹಿಂದೆಯೇ ಸಾವನ್ನಪ್ಪಿದ್ದಾರೆ ಎನ್ನುವುದನ್ನು ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದರು.
ಇದನ್ನೂ ಓದಿ:ಕ್ರಿಕೆಟ್ ಇರೋವರೆಗೂ ಶೇನ್ ವಾರ್ನ್ ಹೆಸರು ಅಜರಾಮರ: ದ್ರಾವಿಡ್ ಕಂಬನಿ