ಮುಂಬೈ: ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕ್ರಿಕೆಟ್ ವೃತ್ತಿಜೀವನದ ಹೊರತಾಗಿಯೂ ನನ್ನ ಜೀವನದಲ್ಲಿ ಎರಡು ವಿಷಾದಗಳಿವೆ ಎಂದು ಭಾರತ ತಂಡದ ಪರ 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳನ್ನಾಡಿರುವ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಏಕದಿನ ಮತ್ತು ಟೆಸ್ಟ್ ಪಂದ್ಯಗಳನ್ನಾಡಿರುವ, ಗರಿಷ್ಠ ರನ್ಗಳಿಸಿರುವ ಹಾಗೂ ಹೆಚ್ಚು ಶತಕ ಸಿಡಿಸಿರುವ ವಿಶ್ವದಾಖಲೆಗಳನ್ನು ಹೊಂದಿರುವ ಸಚಿನ್ಗೆ ಸುನೀಲ್ ಗವಾಸ್ಕರ್ ಜೊತೆ ಮತ್ತು ವಿವಿಯನ್ ರಿಚರ್ಡ್ಸನ್ ವಿರುದ್ಧ ಆಡದಿರುವುದಕ್ಕೆ ಇಂದಿಗೂ ತಾವು ವಿಷಾದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ನಾನು 2 ವಿಷಾದಗಳನ್ನು ಹೊಂದಿದ್ದೇನೆ. ಮೊದಲನೆಯದು ನಾನು ನನ್ನ ಬ್ಯಾಟಿಂಗ್ ಹೀರೋ ಆಗಿರುವ ಸುನೀಲ್ ಗವಾಸ್ಕರ್ ವಿರುದ್ಧ ಆಡದಿರುವುದು. ನಾನು ಅವರ ಬ್ಯಾಟಿಂಗ್ ನೋಡಿಕೊಂಡೆ ಬೆಳೆದೆ, ಆದರೆ ಅವರೊಟ್ಟಿಗೆ ಆಡದಿರುವುದಕ್ಕೆ ವಿಷಾದವಿದೆ. ಗವಾಸ್ಕರ್ ನಾನು ಪದಾರ್ಪಣೆ ಮಾಡುವ ಎರಡು ವರ್ಷಗಳ ಹಿಂದೆಯೇ ನಿವೃತ್ತಿಯಾಗಿದ್ದರು ಎಂದು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ವೆಬ್ಸೈಟ್ವೊಂದಕ್ಕೆ ಹೇಳಿದ್ದಾರೆ.
ನನ್ನ ಎರಡನೇ ವಿಷಾದವೆಂದರೆ ನನ್ನ ಬಾಲ್ಯದ ಹೀರೋ ವಿವಿಯನ್ ರಿಚರ್ಡ್ಸನ್ ವಿರುದ್ಧ ಆಡದಿರುವುದು. ನಾನು ಅವರ ವಿರುದ್ಧ ಕೌಂಟಿ ಕ್ರಿಕೆಟ್ನಲ್ಲಿ ಆಡಿರುವುದು ನನ್ನ ಅದೃಷ್ಟ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ವಿರುದ್ಧ ಆಡದಿರುವುದಕ್ಕೆ ನನಗೆ ಬೇಸರವಿದೆ. ರಿಚರ್ಡ್ಸನ್ 1991ರಲ್ಲಿ ನಿವೃತ್ತಿಯಾದರು. ನಾವು ಒಂದೆರಡು ವರ್ಷಗಳನ್ನು ಹೊಂದಿದ್ದೆವಾದರೂ, ಈ ಅವಧಿಯಲ್ಲಿ ಒಮ್ಮೆಯೂ ಒಬ್ಬರ ವಿರುದ್ಧ ಒಬ್ಬರು ಆಡುವ ಅವಕಾಶ ಸಿಗಲಿಲ್ಲ ಎಂದು ಸಚಿನ್ ಹೇಳಿದ್ದಾರೆ.
ಸಚಿನ್ 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 2013ರಲ್ಲಿ ನಿವೃತ್ತಿಯಾಗುವ ಮುನ್ನ ಭಾರತದ ಪರ 200 ಟೆಸ್ಟ್ ಮತ್ತು 463 ಏಕದಿನ ಪಂದ್ಯಗಳನ್ನಾಡಿದ್ದರು. ಟೆಸ್ಟ್ನಲ್ಲಿ 15921 ಮತ್ತು ಏಕದಿನ ಕ್ರಿಕೆಟ್ನಲ್ಲಿ 18426 ರನ್ಗಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸಿಡಿಸಿರುವ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಎರಡೂ ಮಾದರಿಯಲ್ಲೂ ಗರಿಷ್ಠ ಶತಕ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್ಮನ್ ಎಂದ ದಾಖಲೆ ಕೂಡ ಅವರ ಹೆಸರಿನಲ್ಲಿಯೇ ಇದೆ.