ನವದೆಹಲಿ: ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯವಾಗಿದ್ದು, ಈ ಪಂದ್ಯ ಕೋವಿಡ್ 19 ಕಾರಣದಿಂದ ಪ್ರೇಕ್ಷಕರಿಲ್ಲದೇ ನಡೆಯಲಿದೆ ಎಂದು ಪಿಸಿಎ ಸಿಇಒ ದೀಪಕ್ ಶರ್ಮಾ ತಿಳಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವೆ ಪ್ರಸ್ತುತ ಟಿ-20 ಸರಣಿ ನಡೆಯುತ್ತಿದ್ದು, ಇದರ ನಂತರ ಮೊಹಾಲಿನಲ್ಲಿ ಮೊದಲ ಟೆಸ್ಟ್ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2ನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆ ಎಲ್ಲ ಆಟಗಾರರು ತಮ್ಮ ಐಪಿಎಲ್ ಬಯೋಬಬಲ್ ಸೇರಲಿರುವುದರಿಂದ ಎಚ್ಚರಿಕೆಯ ಕ್ರಮವಾಗಿ ಪಿಸಿಎ ಈ ನಿರ್ಧಾರ ತೆಗೆದುಕೊಂಡಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ 100ನೇ ಪಂದ್ಯವನ್ನು ರೋಹಿತ್ ನಾಯಕತ್ವದಡಿ ಆಡಲು ಸಜ್ಜಾಗಿದ್ದರು. ಈ ಪಂದ್ಯ ಕಣ್ತುಂಬಿಕೊಳ್ಳಲು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ. ಈ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಅಭಿಮಾನಿಗಳ ಆಸೆಗೆ ಭಂಗತಂದಿದೆ.
ಶನಿವಾರ ಎಎನ್ಐ ಜೊತೆ ಮಾತನಾಡಿದ ದೀಪಕ್ ಶರ್ಮಾ, " ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದೆ, ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ" ಎಂದು ಮಾಹಿತಿ ನೀಡಿದ್ದಾರೆ. ಕೊಹ್ಲಿ 99 ಟೆಸ್ಟ್ ಪಂದ್ಯಗಳಿಂದ 50. 39ರ ಸರಾಸರಿಯಲ್ಲಿ 7962 ರನ್ಗಳಿಸಿದ್ದಾರೆ. ಇದರಲ್ಲಿ 27 ಶತಕ ಮತ್ತು 28 ಅರ್ಧಶತಕಗಳು ಸೇರಿವೆ.