ಲಾರ್ಡ್ಸ್(ಲಂಡನ್): ತೊಡೆಸಂದು ಗಾಯದ(ಗ್ರೋಯಿನ್ ಇಂಜುರಿ) ಕಾರಣ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಎರಡನೇ ಏಕದಿನ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆಂದು ವರದಿಯಾಗಿದೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುವ 2ನೇ ಪಂದ್ಯ ತಪ್ಪಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದ ವೇಳೆ ಗ್ರೋಯಿನ್ ಇಂಜರಿಗೊಳಗಾಗಿದ್ದ ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಹೀಗಾಗಿ, ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿದಿದ್ದರು. ಮುಂದಿನ ಎರಡು ಪಂದ್ಯಗಳಲ್ಲೂ ಮಾಜಿ ಕ್ಯಾಪ್ಟನ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರು ಮತ್ತಷ್ಟು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆಂದು ವರದಿಯಾಗಿದೆ.
ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಏಕದಿನ ಪಂದ್ಯವನ್ನಾಡಲು ನ್ಯಾಟಿಂಗ್ಹ್ಯಾಮ್ನಿಂದ ತೆರಳಿದ್ದ ಟೀಂ ಇಂಡಿಯಾ ಜೊತೆ ವಿರಾಟ್ ಕೊಹ್ಲಿ ಪ್ರಯಾಣ ಬೆಳೆಸಿರಲಿಲ್ಲ. ವೈದ್ಯಕೀಯ ಚಿಕಿತ್ಸೆಗೋಸ್ಕರ ಅವರು ನ್ಯಾಟಿಂಗ್ಹ್ಯಾಮ್ನಲ್ಲಿ ಉಳಿದುಕೊಂಡಿದ್ದರೆಂದು ಹೇಳಲಾಗ್ತಿದೆ.
ಕಳೆದ ಎರಡೂವರೆ ವರ್ಷದಿಂದ ವಿರಾಟ್ ಕೊಹ್ಲಿ ರನ್ಗಳಿಸಲು ಹರಸಾಹಸ ಪಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಟಿ-20 ಸರಣಿಯಲ್ಲೂ ವಿರಾಟ್ ಮಿಂಚಿಲ್ಲ. ಹೀಗಾಗಿ, ಮುಂಬರುವ ಟಿ-20 ವಿಶ್ವಕಪ್ನಲ್ಲಿ ಅವರಿಗೆ ಸ್ಥಾನ ನೀಡುವ ಬಗ್ಗೆ ಅನೇಕ ಟೀಕೆ ವ್ಯಕ್ತವಾಗ್ತಿವೆ. ಆದರೆ, ರೋಹಿತ್ ಶರ್ಮಾ ಹಾಗೂ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ರನ್ ಮಷಿನ್ ಪರ ಬ್ಯಾಟ್ ಬೀಸಿದ್ದಾರೆ.