ಮುಂಬೈ: ಭಾರತದ ಅತ್ಯಂತ ಯಶಸ್ವಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಕಳೆದ ಶನಿವಾರ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದರು. ಈ ಘಟನೆ ಬಳಿಕ ಅವರ ನೂರನೇ ಪಂದ್ಯದಲ್ಲಿ ನಾಯಕನಾಗಿ ಬೀಳ್ಕೊಡುಗೆ ಪಂದ್ಯವನ್ನಾಡುವುದಕ್ಕೆ ಬಿಸಿಸಿಐ ಆಫರ್ ನೀಡಿತ್ತು. ಆದ್ರೆ ಅದನ್ನ ವಿರಾಟ್ ನಯವಾಗಿ ತಿರಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸೋಲುಕಂಡು ಸರಣಿ ಸೋಲಿನ ಮುಖಭಂಗ ಅನುಭವಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ 7 ವರ್ಷಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಭಾರತದ ಪರ ಅವರ ಎಲ್ಲಾ ಮಾದರಿಯ ನಾಯಕತ್ವ ಅಂತ್ಯಗೊಂಡಿತು. ಈಗಾಗಲೇ ಟಿ20ಗೆ ಅವರೇ ರಾಜೀನಾಮೆ ಸಲ್ಲಿಸಿದರೆ, ಏಕದಿನ ತಂಡದಿಂದ ಕೊಹ್ಲಿಯನ್ನು ಕೆಳಗಿಳಿಸಲಾಯಿತು.
ಕೆಲವು ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ತಮ್ಮ ರಾಜೀನಾಮೆ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ ಸಂದರ್ಭದಲ್ಲಿ ಮಂಡಳಿ ನಾಯಕನಾಗಿ ಬೀಳ್ಕೊಡುಗೆ ಪಂದ್ಯವನ್ನಾಡುವುದಕ್ಕೆ ಆಫರ್ ನೀಡಿತ್ತು. ಅಲ್ಲದೆ ಆ ಪಂದ್ಯ ಕೊಹ್ಲಿ ಪಾಲಿನ 100ನೇ ಟೆಸ್ಟ್ ಪಂದ್ಯವಾಗಿದ್ದರಿಂದ ವಿಶೇಷ ಮೈಲಿಗಲ್ಲಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲು ಬೋರ್ಡ್ ಕೊಹ್ಲಿಗೆ ತಿಳಿಸಿತ್ತು ಎನ್ನಲಾಗ್ತಿದೆ.
ಆದರೆ 'ಒಂದು ಪಂದ್ಯದಿಂದ ಏನೂ ವ್ಯತ್ಯಾಸವಾಗಲ್ಲ, ನಾನು ಅದನ್ನು ಬಯಸುವವನೂ ಅಲ್ಲ' ಎಂದು ಕೊಹ್ಲಿ ಬೋರ್ಡ್ ಆಫರ್ಅನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗ್ತಿದೆ. ಬ್ಯಾಟಿಂಗ್‌ನತ್ತ ಗಮನ ಹರಿಸಬೇಕೆಂಬ ಒತ್ತಡ ಅವರ ಮೇಲಿರುವ ಕಾರಣ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿರುವಂತೆ ತೋರುತ್ತಿದೆ.
ವಿರಾಟ್ ಕೊಹ್ಲಿ ಒಟ್ಟು 99 ಟೆಸ್ಟ್ ಪಂದ್ಯಗಳನ್ನಾಡಿದ್ದು, 68 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಇದರಲ್ಲಿ 40 ಗೆಲುವು, 12 ಸೋಲು ಕಂಡಿದ್ದು, ಭಾರತ ಟೆಸ್ಟ್ ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕನಾಗಿ ಅವರು ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ:ವಿರಾಟ್ ನಾಯಕತ್ವಕ್ಕೆ ಬೆದರಿಕೆ ಇತ್ತಾ..? ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಿಷ್ಟು..