ಮುಂಬೈ: ಕಳೆದೊಂದು ದಶಕದಲ್ಲಿ ವಿಶ್ವ ಕ್ರಿಕೆಟ್ನ ರನ್ ಮಷಿನ್, ಕಿಂಗ್ ಕೊಹ್ಲಿ ಎಂದೇ ಮೆರೆಯುತ್ತಿರುವ ಜೊತೆಗೆ ಹಲವು ಬ್ಯಾಟಿಂಗ್ ದಾಖಲೆಗಳನ್ನು ಪುಡಿಗಟ್ಟಿ ತನ್ನ ಹೆಸರಿಗೆ ಬರೆದುಕೊಂಡಿರು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 11 ವರ್ಷಗಳ ಬಳಿಕ ಶತಕವಿಲ್ಲದ ವರ್ಷವನ್ನು 2020ರಲ್ಲಿ ಕಳೆದಿದ್ದರು. ಇದೀಗ ಮತ್ತೆ 2021ರಲ್ಲೂ ಅದೇ ಮುಂದುವರಿದಿದೆ.
ಈಗಾಗಲೇ 2021ರ ಕೊನೆಯ ತಿಂಗಳು ಚಾಲ್ತಿಯಲ್ಲಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ಬಹುತೇಕ ಮುಗಿದಿದೆ. ಇದೀಗ ಕೊಹ್ಲಿ ಶತಕದ ಬರ ನೀಗಿಸಿಕೊಳ್ಳುವುದಕ್ಕೆ ಕೇವಲ ಒಂದೇ ಒಂದು ಪಂದ್ಯ ಉಳಿದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 26ರಿಂದ ನಡೆಯುವ ಟೆಸ್ಟ್ ಪಂದ್ಯ ಕೊಹ್ಲಿಗೆ ಶತಕ ಸಿಡಿಸಲು ಉಳಿದಿರುವ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಒಂದು ವೇಳೆ ಆ ಪಂದ್ಯದಲ್ಲೂ ಸಾಧ್ಯವಾಗದಿದ್ದರೆ 2009ರಿಂದ 2021ರವರೆಗಿನ ವರ್ಷಗಳಲ್ಲಿ 2ನೇ ಬಾರಿ ಶತಕವಿಲ್ಲದೆ ಮುಗಿಸಲಿದ್ದಾರೆ. ಆಗಸ್ಟ್ 14 2019ರಲ್ಲಿ ಕೊಹ್ಲಿ ಬಾಗ್ಲಾದೇಶದ ವಿರುದ್ಧ ಸಿಡಿಸಿದ ಶತಕವೇ ಕೊನೆಯ ಶತಕವಾಗಿದೆ.
2008ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕೊಹ್ಲಿ 2009ರಿಂದ ಏಕದಿನ ಕ್ರಿಕೆಟ್ನಲ್ಲಿ ವರ್ಷದಿಂದ ವರ್ಷಕ್ಕೆ ತನ್ನ ಆಟವನ್ನು ಉತ್ತಮಗೊಳಿಸಿಕೊಂಡಿದ್ದ ಅವರು 2019ರವರೆಗೆ 43 ಏಕದಿನ ಶತಕ ಮತ್ತು 27 ಟೆಸ್ಟ್ ಶತಕ ಸಿಡಿಸಿದ್ದಾರೆ. ಆದರೆ 2020ರಲ್ಲಿ ಎರಡೂ ಮಾದರಿಯಲ್ಲೂ ಶತಕ ಸಿಡಿಸುವಲ್ಲಿ ವಿಫಲರಾಗಿದ್ದರು. ಇದೀಗ 2021ರಲ್ಲೂ ಅವರ ಪಾಲಿಗೆ ಶತಕವೆಂಬುದು ಮರೀಚಿಕೆಯಾಗಿದೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 2009ರಲ್ಲಿ 1, 2010ರಲ್ಲಿ 3, 2011ರಲ್ಲಿ 4. 2012 ರಲ್ಲಿ 5, 2013ರಲ್ಲಿ 4, 2015ರಲ್ಲಿ 2, 2016 ರಲ್ಲಿ 3, 2017ರಲ್ಲಿ 6, 2018ರಲ್ಲಿ 6, 2019ರಲ್ಲಿ 5 ಶತಕ ಸಿಡಿಸಿದ್ದಾರೆ.
2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅವರು, 2012ರಲ್ಲಿ ಮೊದಲ ಶತಕ ಸಿಡಿಸಿದ್ದರು. ಒಟ್ಟಾರೆ ಆ ವರ್ಷ 3, 2013 ರಲ್ಲಿ 2, 2014ರಲ್ಲಿ 4, 2015ರಲ್ಲಿ 2, 2016ರಲ್ಲಿ 4, 2017ರಲ್ಲಿ 5, 2018ರಲ್ಲಿ 5 2019ರಲ್ಲಿ 2 ಶತಕ ಸಿಡಿಸಿದ್ದರು.
ಇದನ್ನೂ ಓದಿ:ದ.ಆಫ್ರಿಕಾ ಪ್ರವಾಸಕ್ಕೆ ತಂಡದ ಆಯ್ಕೆ: ಕೊಹ್ಲಿ ಏಕದಿನ ನಾಯಕತ್ವ, ರಹಾನೆ-ಇಶಾಂತ್ ಟೆಸ್ಟ್ ಭವಿಷ್ಯ ನಿರ್ಧಾರ