ಏಷ್ಯಾ ಕಪ್ ಟೂರ್ನಿ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ದಿಗ್ವಿಜಯ ಸಾಧಿಸಿದ್ದು, ಇಡೀ ದೇಶವೇ ಸಂಭ್ರಮಿಸಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅವರ ಸಾಹಸದಿಂದ 5 ವಿಕೆಟ್ಗಳ ಜಯ ದಾಖಲಿಸಿದೆ. ಇದನ್ನು ಹಿರಿಯ ಕ್ರಿಕೆಟಿಗ, 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಶ್ಲಾಘಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, "ಭಾರತ- ಪಾಕಿಸ್ತಾನ ನಡುವಣ ನಡೆದ ಪಂದ್ಯದಲ್ಲಿ ಯಾರೇ ಗೆದ್ದಿರಬಹುದು. ಆದರೆ ನಾನು ಅದನ್ನು ಕ್ರಿಕೆಟ್ ಗೆದ್ದಿದೆ ಎಂದು ವ್ಯಾಖ್ಯಾನಿಸುತ್ತೇನೆ. ಪಂದ್ಯ ನಿಜಕ್ಕೂ ಅದ್ಭುತವಾಗಿತ್ತು. ಎರಡೂ ತಂಡಗಳು ಉತ್ತಮವಾಗಿ ಆಡಿದವು" ಎಂದು ಹೇಳಿದರು.
"ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು, ಪಾಕಿಸ್ತಾನಕ್ಕೆ ಸೋಲಾಗಿದೆ ಎನ್ನದೇ, ಕ್ರಿಕೆಟ್ ಪ್ರೀತಿ ಇಲ್ಲಿ ಗೆದ್ದಿದೆ. ಗೆದ್ದ ತಂಡ ಸಂತೋಷಪಟ್ಟಿದ್ದರೆ, ಸೋತವರು ಮುಂದಿನ ಬಾರಿ ಉತ್ತಮವಾಗಿ ಪ್ರಯತ್ನಿಸಲಿ. ಇದೇ ನಿಜವಾದ ಕ್ರೀಡೆ" ಎಂದಿದ್ದಾರೆ.
ಇನ್ನು, ಏಷ್ಯಾ ಕಪ್ನ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡೆಸಿದ ಸೆಣಸಾಟದಲ್ಲಿ ರೋಹಿತ್ ಶರ್ಮಾ ಪಡೆ, ಬಾಬರ್ ಆಜಂ ತಂಡದೆದುರು ಪಾರಮ್ಯ ಮೆರೆದು ವಿಜಯ ಸಾಧಿಸಿತು. ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಮಿಂಚಿ 3 ವಿಕೆಟ್ ಪಡೆದಿದ್ದಲ್ಲದೇ, ಬ್ಯಾಟಿಂಗ್ನಲ್ಲೂ ತೋಳ್ಬಲ ತೋರಿಸಿ 33 ರನ್ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಬೌಲಿಂಗ್ ಪಡೆಯ ನೇತೃತ್ವ ವಹಿಸಿರುವ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ನಿಂದ 4 ವಿಕೆಟ್ ಉರುಳಿಸಿ ಪಾಕಿಸ್ತಾನದ ಬೆನ್ನೆಲುಬು ಮುರಿದಿದ್ದರು. ಇನ್ನು, ಟೂರ್ನಿಯಲ್ಲಿ ಭಾರತ ನಾಳೆ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದು ಸೂಪರ್ ಹಂತ ತಲುಪುವ ಉತ್ಸಾಹದಲ್ಲಿದೆ.
ಓದಿ: ಏಷ್ಯಾಕಪ್ 2022: ಪಾಕ್ ಪ್ಲೇಯರ್ಗೆ ಸಹಿ ಮಾಡಿದ ಜರ್ಸಿ ಗಿಫ್ಟ್ ಮಾಡಿದ ವಿರಾಟ್