ಜೈಪುರ: ಸೈಯದ್ ಮುಷ್ತಾಕ್ ಅಲಿ ಫೈನಲ್ನಲ್ಲಿ ತಮಿಳುನಾಡು ವಿರುದ್ಧ ಸೋಲು ಕಂಡು ನಿರಾಸೆಯನುಭವಿಸಿರುವ ಕರ್ನಾಟಕ ತಂಡ ಇದೀಗ ಮಂಗಳವಾರ ನಡೆಯುವ ವಿಜಯ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ನಲ್ಲಿ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಕೇವಲ 122 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತ್ತು. ಆದರೆ, ಇದೀಗ ಪ್ರೀ ಕ್ವಾರ್ಟರ್ ಫೈನಲ್ ಗೆದ್ದಿರುವ ಉತ್ಸಾಹದ ಜೊತೆಗೆ ಸ್ಟಾರ್ ಆಟಗಾರರಾದ ಪ್ರಸಿಧ್ ಕೃಷ್ಣ, ಕೃಷ್ಣಪ್ಪ ಗೌತಮ್ ಮತ್ತು ಯುವ ಆರಂಭಿಕ ದೇವದತ್ ಪಡಿಕ್ಕಲ್ ತಂಡ ಸೇರಿರುವುದರಿಂದ ತಮಿಳುನಾಡು ವಿರುದ್ಧ ಕರ್ನಾಟಕ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಇತ್ತ ತಮಿಳುನಾಡು ಮೊದಲ 3 ಲೀಗ್ ಪಂದ್ಯಗಳನ್ನು ಗೆದ್ದ ನಂತರ ಪುದುಚೇರಿ ವಿರುದ್ಧ 226 ಮತ್ತು 115 ರನ್ಗಳ ಸುಲಭ ಗುರಿ ಬೆನ್ನಟ್ಟಲಾಗದೇ ಹೀನಾಯ ಸೋಲು ಕಂಡಿದೆ. ಲೀಗ್ ನಂತರ ಒಂದು ವಾರ ವಿಶ್ರಾಂತಿ ಪಡೆದಿರುವ ತಮಿಳುನಾಡು ಈ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಪೈಪೋಟಿ ನೀಡುವ ಕಾತುರದಲ್ಲಿದೆ.
ಕರ್ನಾಟಕ ಟೂರ್ನಿಯಲ್ಲೇ ಅತ್ಯುತ್ತಮ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದೆ. ಆರ್ ಸಮರ್ಥ್, ದೇವದತ್ ಪಡಿಕ್ಕಲ್, ಕೆ ಸಿದ್ಧಾರ್ಥ್, ನಾಯಕ ಮನೀಶ್ ಪಾಂಡೆ, ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ಮತ್ತು ಕೆ ಗೌತಮ್ ಬ್ಯಾಟಿಂಗ್ ಬಲವಾಗಿದ್ದರೆ, ಬೌಲಿಂಗ್ನಲ್ಲಿ ಪ್ರಸಿಧ್ ಕೃಷ್ಣ, ವೈಶಾಕ್ ಜೊತೆಗೆ ಸ್ಪಿನ್ ಬೌಲರ್ಗಳು ತಮಿಳುನಾಡು ಬ್ಯಾಟರ್ಗಳಿಗೆ ಸವಾಲೊಡ್ಡಲಿದ್ದಾರೆ.
ಇತ್ತ ತಮಿಳುನಾಡು ತಂಡದಲ್ಲಿ ಎನ್ ಜಗದೀಶನ್, ಬಾಬಾ ಇಂದ್ರಜಿತ್, ದಿನೇಶ್ ಕಾರ್ತಿಕ್, ನಾಯಕ ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್, ಪವರ್ ಹಿಟ್ಟರ್ ಶಾರುಖ್ ಖಾನ್ ಅಂತಹ ಅನುಭವಿಗಳಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸಾಯಿ ಕಿಶೋರ್, ಸಂಜಯ್ ಯಾದವ್ ಮತ್ತು ಎಂ ಸಿದ್ಧಾರ್ಥ್ ಟೂರ್ನಿಯಲ್ಲಿ ಯಶಸ್ವಿ ಬೌಲರ್ಗಳಾಗಿದ್ದಾರೆ.
ತಮಿಳುನಾಡು ಮತ್ತು ಕರ್ನಾಟಕ ತಂಡಗಳು ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಕರ್ನಾಟಕ 13 ಮತ್ತು ತಮಿಳುನಾಡು 10 ಬಾರಿ ಗೆಲುವು ಸಾಧಿಸಿದೆ. ಇನ್ನೂ ಟೂರ್ನಮೆಂಟ್ ಇತಿಹಾಸದಲ್ಲಿ ತಮಿಳುನಾಡು ಒಟ್ಟು 5 ಬಾರಿ ಚಾಂಪಿಯನ್ ಆಗಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದ್ದರೆ, ಕರ್ನಾಟಕ 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಮುಂಬೈ ಜೊತೆ 2ನೇ ಸ್ಥಾನ ಪಡೆದುಕೊಂಡಿದೆ.
ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶ ತಂಡಗಳು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.