ಕ್ರೈಸ್ಟ್‌ಚರ್ಚ್(ನ್ಯೂಜಿಲ್ಯಾಂಡ್): ಜಮ್ಮು ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ ವೇಗ ತಂಡಕ್ಕೆ ಸಹಕಾರಿ. ಸ್ಪೀಡ್ನಿಂದಾಗಿ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ಸಾಧ್ಯವಾಗುತ್ತದೆ. ಮಲಿಕ್ ದಕ್ಷಿಣ ಆಫ್ರಿಕಾದ ಅನ್ರಿಚ್ ನೋಕಿಯಾ ಮತ್ತು ಇಂಗ್ಲೆಂಡ್ನ ಮಾರ್ಕ್ ವುಡ್ ಮಾದರಿ ಬಿರುಸಿನ ದಾಳಿ ಮಾಡುತ್ತಾರೆ ಎಂದು ಯುವವೇಗಿ ಅರ್ಷದೀಪ್ ಸಿಂಗ್ ಹೇಳಿದರು.
ನ್ಯೂಜಿಲ್ಯಾಂಡ್ ವಿರುದ್ಧದ 3ನೇ ಮತ್ತು ಅಂತಿಮ ಏಕದಿನ ಪಂದ್ಯಕ್ಕೂ ಮೊದಲು ತಂಡದ ಸಿದ್ಧತೆ ಬಗ್ಗೆ ಮಾತನಾಡಿದ ಸಿಂಗ್, ಉಮ್ರಾನ್ ಮಲಿಕ್ ಜೊತೆಗೆ ಬೌಲಿಂಗ್ ಮಾಡುವುದು ಖುಷಿ ನೀಡುತ್ತದೆ. ಉಮ್ರಾನ್ ಬೌಲಿಂಗ್‌ನಿಂದ ನಾನು ಸಾಕಷ್ಟು ಕಲಿತಿದ್ದೇನೆ. ಗಂಟೆಗೆ 155, 135 ಕಿಮೀ ವೇಗದಲ್ಲಿ ಆತ ಬೌಲಿಂಗ್ ಮಾಡಿ ಬ್ಯಾಟರ್ಗಳ ದಂಗು ಬಡಿಸುತ್ತಾನೆ ಎಂದು ಹೊಗಳಿದರು.
ಟಿ20 ಮತ್ತು ಏಕದಿನ ಮಾದರಿ ಬದಲಾದರೂ ನನ್ನ ಬೌಲಿಂಗ್ ಶೈಲಿ ಬದಲಿಸಿಲ್ಲ. ಟಿ20ಯಲ್ಲಿ ಆರಂಭದಲ್ಲಿ ಆಕ್ರಮಣಕಾರಿ ಬೌಲಿಂಗ್ ಮಾಡುವೆ. ಕೊನೆಯಲ್ಲಿ ರಕ್ಷಣಾತ್ಮಕವಾಗಿ ಎಸೆಯುವೆ. ಏಕದಿನದಲ್ಲೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಅವಕಾಶ ಸಿಕ್ಕಲ್ಲಿ ನಾನು ಉತ್ತಮ ಪ್ರದರ್ಶನ ನೀಡುವೆ ಎಂದರು.
ಅಭಿಮಾನಿಗಳಿಗೆ ಟೀಕಿಸುವ ಹಕ್ಕಿದೆ: ದುಬೈನಲ್ಲಿ ನಡೆದ ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಬಿಟ್ಟು ಟೀಕೆಗೆ ಗುರಿಯಾದ ಬಗ್ಗೆ ಮಾತನಾಡಿದ ಸಿಂಗ್, ನಾವು ಉತ್ತಮ ಪ್ರದರ್ಶನ ನೀಡಿದಾಗ ಅಭಿಮಾನಿಗಳು ಭೇಷ್ ಎಂದು ಬೆನ್ನು ತಟ್ಟುತ್ತಾರೆ. ಎಡವಟ್ಟು ಮಾಡಿದಲ್ಲಿ ಅವರೇ ನಮ್ಮನ್ನು ಟೀಕಿಸುತ್ತಾರೆ. ಅದು ಅವರ ಹಕ್ಕಾಗಿದೆ. ಆಟ ಮತ್ತು ತಂಡವನ್ನು ಅವರು ಪ್ರೀತಿಸುತ್ತಾರೆ. ಹೀಗಾಗಿ ಟೀಕೆ ಮತ್ತು ಶ್ಲಾಘನೆಯನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟರು.
ಓದಿ: ಹಾರ್ದಿಕ್, ಪೃಥ್ವಿ ಶಾ ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕರು: ಗಂಭೀರ್