ಹೈದರಾಬಾದ್: ಇಂಗ್ಲೆಂಡ್‌ನ ಐತಿಹಾಸಿಕ ಕ್ರೀಡಾಂಗಣ ಲಾರ್ಡ್ಸ್‌ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ಇಂಗ್ಲೆಂಡ್ ತಂಡಕ್ಕೆ ತಮ್ಮ ತೋಳ್ಬಲ ತೋರಿಸಿದ್ದ ಸೌರವ್ ಗಂಗೂಲಿ ಹಾಗೂ ದ್ರಾವಿಡ್ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟು ಇಂದಿಗೆ 25 ವರ್ಷಗಳಾಗುತ್ತಿವೆ. ಈ ಇಬ್ಬರು ಭಾರತೀಯ ಕ್ರಿಕೆಟಿಗರು 15ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತ ತಂಡದಲ್ಲಿ ಜೊತೆಯಾಗಿ ಆಡಿದ್ದರು.
ಈ ಇಬ್ಬರೂ ಹಲವು ಪ್ರತಿಭೆಗಳನ್ನೂ ಹುಟ್ಟು ಹಾಕಿದ್ದಾರೆ. ಇಂದು ವಿಶ್ವದಲ್ಲಿ ಭಾರತ ತಂಡ ಬಲಿಷ್ಠವಾಗಿ ಬೆಳೆಯಲು ಇವರ ಕೊಡುಗೆ ಮಹತ್ವದ್ದು. ಜೂನ್ 20, 1996 ರಂದು ಗಂಗೂಲಿ ಹಾಗು ದ್ರಾವಿಡ್ ಜೊತೆಯಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಮೊದಲ ಪಂದ್ಯದಲ್ಲಿಯೇ ಕ್ರಿಕೆಟ್ ಜನಕರನ್ನು(ಇಂಗ್ಲೆಂಡ್) ಕಾಡಿದ್ದ ಗಂಗೂಲಿ 131 ರನ್ಗಳಿಸಿದರೆ, ದ್ರಾವಿಡ್ 95 ರನ್ ಕಲೆ ಹಾಕಿದ್ದರು.
ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ನಾಯಕರೆಂದು ಹೆಸರು ಮಾಡಿರುವ ಗಂಗೂಲಿ, 1999ರಲ್ಲಿ ತಂಡ ಫಿಕ್ಸಿಂಗ್ ಅಪಖ್ಯಾತಿಗೆ ಒಳಗಾಗಿದ್ದ ಸಂದರ್ಭದಲ್ಲಿ ಭಾರತ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು. ಅಷ್ಟೇ ಅಲ್ಲ, ಬಲಿಷ್ಠ ತಂಡ ಕಟ್ಟಿದ ಹಿರಿಮೆಯನ್ನೂ ಇವರು ಹೊಂದಿದ್ದಾರೆ. ಭಾರತ ತಂಡಕ್ಕೆ ಧೋನಿ, ಯುವರಾಜ್, ಜಹೀರ್ ಖಾನ್, ಹರ್ಭಜನ್ ಸಿಂಗ್ರಂತಹ ಹಲವಾರು ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಿ ಭಾರತ ತಂಡವನ್ನು ಎಲ್ಲ ಮಾದರಿಯಲ್ಲೂ ಬಲಗೊಳಿಸಿದ್ದರು.
ಇನ್ನು ಜಂಟಲ್ ಮ್ಯಾನ್ ಖ್ಯಾತಿಯ ದ್ರಾವಿಡ್, ಗಂಗೂಲಿ ಬೆನ್ನಿಗೆ ನಿಂತು ತಂಡದ ಉಪನಾಯಕನ ಜವಾಬ್ದಾರಿ ನಿರ್ವಹಿಸಿದ್ದರು. ಭಾರತ ತಂಡದ ಪರ 16 ಕ್ಕೂ ಹೆಚ್ಚು ವರ್ಷಗಳ ಕಾಲ ಕ್ರಿಕೆಟ್ ಆಡಿರುವ ದ್ರಾವಿಡ್, ದಿ ವಾಲ್ ಎಂದೇ ಹೆಸರು ಪಡೆದವರು. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ದ್ರಾವಿಡ್ ಪ್ರಸ್ತುತ ಭಾರತ ತಂಡದ ಕೋಚ್ ಆಗಿದ್ದು, ಯುವ ಪೀಳಿಗೆಯನ್ನು ಸಜ್ಜುಗೊಳಿಸುತ್ತಿದ್ದಾರೆ.
ದ್ರಾವಿಡ್ - ಗಂಗೂಲಿ ತಮ್ಮ ಕ್ರಿಕೆಟ್ ವೃತ್ತಿ ಬದುಕು ಮುಗಿಸಿದ್ದಾರೆ. ಆದರೆ ಅವರು ಹಾದು ಹೋದ ಹಾದಿ ಮಾತ್ರ ಇನ್ನೂ ಅಳಿಸಿಹೋಗದೆ ಹಾಗೆಯೇ ಉಳಿದಿದೆ.