ಕರಾಚಿ: ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಇದೀಗ ಮತ್ತೆ ಆರಂಭವಾಗಿದೆ. 8 ತಿಂಗಳ ಹಿಂದೆ ಲೀಗ್ ಹಂತದ ಪಂದ್ಯದ ವೇಳೆ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಟೂರ್ನಿ ಮತ್ತೆ ಆರಂಭವಾಗಿದೆ.
ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಲಾಹೋರ್ ಕಲಾಂದರ್ಸ್ ತಂಡದ ಆಲ್ರೌಂಡರ್ ಡೇವಿಡ್ ವೈಸೆಯ ಅದ್ಭುತ ಪ್ರದರ್ಶನದಿಂದ ಮುಲ್ತಾನ್ ಸುಲ್ತಾನ್ಸ್ ವಿರುದ್ಧ 25 ರನ್ಗಳ ಭರ್ಜರಿ ಜಯ ದಾಖಲಿಸಿ ಫೈನಲ್ ಪ್ರವೇಶ ಪಡೆದಿದೆ.
ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ವಿರುದ್ಧ ಲಾಹೋರ್ ಕಲಾಂದರ್ಸ್ ತಂಡ ಸೆಣೆಸಾಡಲಿದೆ. ಇದಕ್ಕೂ ಹಿಂದೆ ಕರಾಚಿ ಕಿಂಗ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡದ ವಿರುದ್ಧ ಸೂಪರ್ ಓವರ್ನಲ್ಲಿ ಜಯಿಸಿ ಫೈನಲ್ ಪ್ರವೇಶಿಸಿತ್ತು.
ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಮುಲ್ತಾನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ಗಾಗಿ ಮೈದಾನಕ್ಕಿಳಿದ ಆ್ಯಡಮ್ ಲೀಥ್ 50 ರನ್ಗಳಿಸಿದರೆ, ಆಲ್ರೌಂಡರ್ ವೈಸ್ 21 ಎಸೆತದಲ್ಲಿ 48 ರನ್ ದಾಖಲಿಸಿ ತಂಡ ಒಟ್ಟು 20 ಓವರ್ನಲ್ಲಿ 182 ರನ್ ಗಳಿಸುವಲ್ಲಿ ನೆರವಾದರು.
ಬಳಿಕ ಬೌಲಿಂಗ್ನಲ್ಲೂ ಮಿಂಚಿದ ವೈಸ್ 27ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಮುಲ್ತಾನ್ ತಂಡ ಕೇವಲ 19.1 ಓವರ್ನಲ್ಲಿ 157 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಡೇವಿಡ್ ವೈಸ್ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ಗೆ ಭಾಜನರಾದರು.