ದುಬೈ: ಕೊರೊನಾ ಸಂಕಷ್ಟದಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ 2021ರ ಟೂರ್ನಿ, ಈಗ ಎರಡನೇ ಭಾಗ ಆರಂಭಕ್ಕೆ ಇನ್ನೂ 4 ದಿನ ಮಾತ್ರ ಬಾಕಿಯಿದೆ. ಈಗಾಗಲೇ ಎಲ್ಲ ತಂಡಗಳು ದುಬೈನಲ್ಲಿ ಬೀಡುಬಿಟ್ಟಿವೆ. ಎಲ್ಲ ತಂಡದ ಆಟಗಾರರು ಸದ್ಯ ಕ್ವಾರಂಟೈನ್ನಲ್ಲಿದ್ದು, ಆಟಗಾರರನ್ನು ಹುರಿದುಂಬಿಸಲು ಆಯಾ ತಂಡಗಳು ಮನರಂಜನಾ ಕಾರ್ಯಕ್ರಮ ಆಯೋಜಿಸಿವೆ.
ಹೌದು, ಈಗ ಎಲ್ಲ ತಂಡಗಳು ತಮ್ಮ ಆಟಗಾರರಿಗೆ ಮನರಂಜನೆ ಜೊತೆಗೆ ತಂಡದ ಎಲ್ಲ ಸದಸ್ಯರನ್ನು ಒಟ್ಟುಗೂಡಿಸಿವ ಕೆಲಸಕ್ಕೆ ಮುಂದಾಗಿದ್ದು, ಹಾಗೇಯೆ ಕನ್ನಡಿಗ ಕೆ. ಎಲ್. ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಕೂಡಾ ಮನರಂಜನಾ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕೋಚ್ ಅನಿಲ್ ಕುಂಬ್ಳೆ ಹಾಗೂ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಸೇರಿದಂತೆ ಅನೇಕರು ತಮ್ಮ ಹಾಡುಗಾರಿಕೆ ಮೂಲಕ ಆಟಗಾರರಿಗೆ ಮನರಂಜನೆ ನೀಡಿದ್ದಾರೆ.
- " class="align-text-top noRightClick twitterSection" data="">
ಅದರಲ್ಲೂ ಕೋಚ್ ಅನಿಲ್ ಕುಂಬ್ಳೆ ಕನ್ನಡ ಸಿನಿಮಾದ ಜನಪ್ರಿಯ ಹಾಡು ಹಾಡುವ ಮೂಲಕ ಎಲ್ಲಾ ಕನ್ನಡಿಗರ ಮನಗೆದ್ದಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಂಬ್ಳೆ 1974 ರಲ್ಲಿ ತೆರೆಕಂಡಿದ್ದ ಸಾಹಸಸಿಂಹ ವಿಷ್ಣುವರ್ಧನ್, ಭಾರತಿ, ಲೀಲಾವತಿ ಅಭಿನಯದ ದೇವರಗುಡಿ ಚಿತ್ರದ "ಮಾಮರವೆಲ್ಲೋ ಕೋಗಿಲೆಯೆಲ್ಲೋ" ಗೀತೆಯನ್ನು ಹಾಡುವ ಮೂಲಕ ಕುಂಬ್ಳೆ ದುಬೈನಲ್ಲಿ ಕನ್ನಡದ ಕಂಪು ಪಸರಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ ಕನ್ನಡಿಗರ ತಂಡ ಅನ್ನೋ ಮಾತಿದೆ. ಈ ತಂಡದಲ್ಲಿ ಕನ್ನಡಿಗರಿಗೆ ಹೆಚ್ಚು ಮಣೆ ಹಾಕಲಾಗುತ್ತದೆ. ಪಂಜಾಬ್ ತಂಡದಲ್ಲಿ ಕೋಚ್ ಅನಿಲ್ ಕುಂಬ್ಳೆ, ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಜೆ ಸುಚಿತ್ ಸೇರಿದಂತೆ ಕನ್ನಡಿಗರ ದಂಡೇ ಇದೆ.