ಸೂರ್ಯಕುಮಾರ್ ಯಾದವ್ ಸದ್ಯ ಏಕದಿನ ಮತ್ತು ಟಿ20 ಮಾದರಿಯಲ್ಲಿ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗ. ವಿಶಿಷ್ಟ ಶೈಲಿಯ ಬ್ಯಾಟಿಂಗ್‌ಗೆ 'ಸ್ಕೈ' ಹೆಸರುವಾಸಿ. ಏಕದಿನ ಮತ್ತು ಟಿ20ಯಲ್ಲಿ ಯಶಸ್ಸು ಸಾಧಿಸಿರುವ ಮಿಸ್ಟರ್ 360 ಬ್ಯಾಟರ್ ಇದೀಗ ಟೆಸ್ಟ್ ಕ್ರಿಕೆಟ್‌ನತ್ತ ದೃಷ್ಟಿ ನೆಟ್ಟಿದ್ದಾರೆ. ತವರಿನಲ್ಲಿ ನಡೆಯಲಿರುವ ಮಹತ್ವದ ನಾಲ್ಕು ಪಂದ್ಯಗಳ ಗವಾಸ್ಕರ್-ಬಾರ್ಡರ್ ಟ್ರೋಫಿ ಸರಣಿಯಲ್ಲೂ ಸೂರ್ಯ, ಕಮಾಲ್ ಮಾಡ್ತಾರಾ ಅನ್ನೋದು ಈಗಿನ ಕುತೂಹಲ.
ಈಗಾಗಲೇ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾ ತಂಡ ಬೆಂಗಳೂರಿನ ಆಲೂರಿನ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತವಾಗಿದೆ. ಇತ್ತ ಸೂರ್ಯ ಕುಮಾರ್ ಯಾದವ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಂಪು ಚೆಂಡಿನ ಫೋಟೊ ಹಾಕಿ 'ಹಲೋ ಫ್ರೆಂಡ್' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಯಾದವ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸುಳಿವು ಕೊಟ್ಟಿದೆ.
ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ನಂತರ 'ಮಿ 360 ಡಿಗ್ರಿ' ಬ್ಯಾಟರ್ ಎಂಬ ಖ್ಯಾತಿ ಗಳಿಸಿರುವ ಸೂರ್ಯ ಈಗಾಗಲೇ ಆನೇಕ ದಾಖಲೆಗಳನ್ನು ಏಕದಿನ ಮತ್ತು ಟಿ20 ಮಾದರಿಯಲ್ಲಿ ಮಾಡಿದ್ದಾರೆ. ಚುಟುಕು ಮಾದರಿಯಲ್ಲಿ ನಂಬರ್ ಒನ್ ಬ್ಯಾಟರ್ ಆಗಿರುವ ಇವರು ಶ್ರೇಯಾಂಕ ಪಟ್ಟಿಯಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತದ ಮೊದಲ ಮತ್ತು ವಿಶ್ವದ 2ನೇ ಆಟಗಾರನಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಲ್ಲದೇ ಅತ್ಯಧಿಕ 910 ರೇಟಿಂಗ್ ಸಂಪಾದಿಸಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್ನ ಡೇವಿಡ್ ಮಲಾನ್ 915 ರೇಟಿಂಗ್ ಗಳಿಸಿದ್ದು, ಈ ವರೆಗಿನ ಅತ್ಯಧಿಕ ರೇಟಿಂಗ್ ಆಗಿದೆ. ಫೆ.9 ರಂದು ಶುರುವಾಗುವ ಆಸ್ಟ್ರೇಲಿಯಾ-ಭಾರತ ನಡುವಿನ ರೋಚಕ ಟೆಸ್ಟ್ ಸರಣಿಗೆ ಅಖಾಡ ಸಿದ್ದವಾಗಿದೆ. ಚುಟುಕು ಕ್ರಿಕೆಟ್ನಲ್ಲಿ 180.34 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಸೂರ್ಯ, ಟೆಸ್ಟ್ ಕ್ರಿಕೆಟ್ ಸೇರಿ ಮೋಡಿ ಮಾಡ್ತಾರಾ ಅನ್ನೋದು ಅಭಿಮಾನಿಗಳ ಕುತೂಹಲ.
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ: ನಾಗ್ಪುರ ತಲುಪಿದ ವಿರಾಟ್, ರಾಹುಲ್..