ಮುಂಬೈ : ಶನಿವಾರ ವಿರಾಟ್ ಕೊಹ್ಲಿ 7 ವರ್ಷದ ತಮ್ಮ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೊಹ್ಲಿಯ ಈ ದಿಢೀರ್ ನಿರ್ಧಾರದಿಂದ ಬಿಸಿಸಿಐ, ಕ್ರಿಕೆಟಿಗರಲ್ಲದೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಇದೀಗ ಅವರ ಸ್ಥಾನಕ್ಕೆ ಸೂಕ್ತ ಯಾರು ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ವಿಕೆಟ್ ಕೀಪರ್ ರಿಷಭ್ ಪಂತ್ ಹೆಸರನ್ನು ಸೂಚಿಸಿ ಅಚ್ಚರಿ ಮೂಡಿಸಿದ್ದಾರೆ.
ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 1-2ರಿಂದ ಸರಣಿಯನ್ನು ಕಳೆದುಕೊಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ ಏಕಾಏಕಿ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರ ಸ್ಥಾನಕ್ಕೆ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವಾರು ಅನುಭವಿಗಳ ಹೆಸರು ಕೇಳಿ ಬರುತ್ತಿವೆ. ಆದರೆ, ಗವಾಸ್ಕರ್ ಮಾತ್ರ ಭಾರತೀಯ ಕ್ರಿಕೆಟ್‌ನ ದೀರ್ಘಕಾಲದವರೆಗೆ ನಾಯಕನಾಗಿ ಉಳಿಯಲು ನೆರವಾಗುತ್ತದೆ ಎಂದು ವಿಕೆಟ್ ಕೀಪರ್ ಪಂತ್ ಹೆಸರನ್ನು ಸೂಚಿಸಿದ್ದಾರೆ.
ಕೊಹ್ಲಿ ನಿವೃತ್ತಿ ನಂತರ ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗವವರು ಯಾರು ಎಂಬ ಚರ್ಚೆ ನಡೆಯುತ್ತಿದೆ. ಭಾರತ ತಂಡದ ಮೂರು ವಿಭಾಗದಲ್ಲಿ ನೇರ ಆಯ್ಕೆಯಾಗಿರುವ ಆಟಗಾರನಿಗೆ ಈ ಜವಾಬ್ದಾರಿ ನೀಡಬೇಕು. ನನ್ನನ್ನು ಕೇಳಿದರೆ, ರಿಷಭ್ ಪಂತ್ ಭಾರತ ತಂಡದ ಮುಂದಿನ ನಾಯಕನಾಗಬೇಕೆಂದು ಹೇಳುತ್ತೇನೆ ಎಂದು ಗವಾಸ್ಕರ್ ಹೇಳಿದ್ದಾರೆ.
ಐಪಿಎಲ್ನಲ್ಲಿ ರಿಕಿ ಪಾಂಟಿಂಗ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ತ್ಯಜಿಸಿದಾಗ ರೋಹಿತ್ ಶರ್ಮಾಗೆ ನಾಯಕತ್ವವನ್ನು ನೀಡಲಾಯಿತು. ಅಲ್ಲಿಂದ ಅವರ ಬ್ಯಾಟಿಂಗ್ನಲ್ಲಾದ ಬದಲಾವಣೆಯನ್ನು ನೋಡಿ, ನಾಯಕನ ಜವಾಬ್ದಾರಿ ಬರುತ್ತಿದ್ದಂತೆ ಅದು ಅವರನ್ನು ಅತ್ಯುತ್ತಮ ಬ್ಯಾಟರ್ ಆಗಿ ರೂಪಿಸಿತು.
30, 40, 50ಗಳನ್ನು ನೂರು, 150 ಮತ್ತು 200 ರನ್ಗಳಾಗಿ ಪರಿವರ್ತಿಸಿದರು. ರಿಷಬ್ ಪಂತ್ ಅವರಿಗೂ ಇಂತಹ ಜವಾಬ್ದಾರಿ ನೀಡುವುದರಿಂದ ಅವರಿಂದ ದಕ್ಷಿಣ ಆಫ್ರಿಕಾ ವಿರುದ್ದ ಕೇಪ್ಟೌನ್ನಲ್ಲಿ ಸಿಡಿಸಿದಂತಹ ಆಟವನ್ನು ನಾವು ಮುಂದೆ ಸಾಕಷ್ಟು ಸಾರಿ ನೋಡಬಹುದು ಎಂದು ಗವಾಸ್ಕರ್ ರಿಷಭ್ ಪಂತ್ಗೆ ಏಕೆ ನಾಯಕತ್ವ ನೀಡಬೇಕೆಂದು ವಿವರಿಸಿದ್ದಾರೆ.
ಇದನ್ನೂ ಓದಿ:ಭಾರತ ಟೆಸ್ಟ್ ತಂಡದ ನಂಬರ್ 1 ನಾಯಕ ಕೊಹ್ಲಿಯ ದಾಖಲೆಗಳ ವಿವರ..