ಕೊಲಂಬೊ(ಶ್ರೀಲಂಕಾ): ರಾಜಕೀಯ ಅಸ್ಥಿರತೆ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಏಷ್ಯಾ ಕಪ್ ಟಿ-20 ಟೂರ್ನಿ ಆಯೋಜನೆಯಿಂದ ಹಿಂದೆ ಸರಿದಿದೆ. ಸದ್ಯದ ಪರಿಸ್ಥಿತಿಯಲ್ಲಿ ಏಷ್ಯಾಕಪ್ ಟೂರ್ನಿ ಆತಿಥ್ಯ ವಹಿಸುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಮಾಹಿತಿ ನೀಡಿದೆ.
ಆಗಸ್ಟ್ 26ರಿಂದ ಸೆಪ್ಟೆಂಬರ್ 11ರವರೆಗೆ ಏಷ್ಯಾಕಪ್ ಟಿ20 ಟೂರ್ನಿ ಆಯೋಜನೆಗೊಂಡಿದೆ. ಶ್ರೀಲಂಕಾದಲ್ಲಿ ಟೂರ್ನಿ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿರುವ ಕಾರಣ ಇದೀಗ ಆಯೋಜನೆಯಿಂದ ಲಂಕಾ ಕ್ರಿಕೆಟ್ ಬೋರ್ಡ್ ಹಿಂದೆ ಸರಿದಿದೆ. ಇದೀಗ ದುಬೈನಲ್ಲಿ ಏಷ್ಯಾಕಪ್ ಟೂರ್ನಿ ಆಯೋಜನೆಗೊಳ್ಳಲಿದೆ. ಏಷ್ಯಾ ಕಪ್ನಲ್ಲಿ ಈ ಸಲ ಒಟ್ಟು ಆರು ತಂಡಗಳು ಭಾಗಿಯಾಗಲಿವೆ. ಶ್ರೀಲಂಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದುಕೊಂಡಿದ್ದು, ಇನ್ನೊಂದು ತಂಡ ಅರ್ಹತಾ ಸುತ್ತಿನ ಮೂಲಕ ಎಂಟ್ರಿ ನೀಡಲಿದೆ.
ಇದನ್ನೂ ಓದಿರಿ: 2022ರ ಏಷ್ಯಾಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್.. ಆಗಸ್ಟ್ 27ರಿಂದ T20 ಮಾದರಿಯಲ್ಲಿ ಟೂರ್ನಿ
ಶ್ರೀಲಂಕಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಈಗಾಗಲೇ ಲಂಕಾ ಪ್ರೀಮಿಯರ್ ಲೀಗ್ನ ಮೂರನೇ ಆವೃತ್ತಿ ಮುಂದೂಡಿಕೆ ಮಾಡಿದೆ. ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ -20 ವಿಶ್ವಕಪ್ ನಡೆಯಲಿರುವ ಕಾರಣ ಇದೀಗ ಏಷ್ಯಾಕಪ್ ಯಾವ ಸ್ಥಳದಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಮುಂದಿನ ಕೆಲ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಈ ಟೂರ್ನಿ 2020ರಲ್ಲೇ ಶ್ರೀಲಂಕಾದಲ್ಲಿ ನಡೆಯಬೇಕಾಗಿತ್ತು. ಆದರೆ, ಕೋವಿಡ್ನಿಂದಾಗಿ ಮುಂದೂಡಲ್ಪಟ್ಟಿತ್ತು.14ನೇ ಆವೃತ್ತಿ ಏಷ್ಯಾ ಕಪ್ ಟೂರ್ನಿ ಇದಾಗಿದ್ದು, 1984 ರಿಂದಲೂ ನಡೆಯುತ್ತಿರುವ ಈ ಟೂರ್ನಾಮೆಂಟ್ನಲ್ಲಿ ಭಾರತ ಏಳು ಸಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉಳಿದಂತೆ ಶ್ರೀಲಂಕಾ ಐದು ಸಲ ಚಾಂಪಿಯನ್ ಆಗಿದ್ದು, ಪಾಕಿಸ್ತಾನ ಕೇವಲ ಎರಡು ಸಲ ಪ್ರಶಸ್ತಿ ಗೆದ್ದಿದೆ.
2018ರಲ್ಲಿ ಕೊನೆಯ ಬಾರಿ ಏಷ್ಯಾಕಪ್ ನಡೆದಿತ್ತು. ನಂತರ 2020ರ ಆವೃತ್ತಿಯನ್ನು ಶ್ರೀಲಂಕಾಗೆ ಸ್ಥಳಾಂತರಿಸಲಾಗಿತ್ತು. ಆದರೆ, ಕಳೆದ ವರ್ಷ ವಿಶ್ವದಾದ್ಯಂತ ಕೋವಿಡ್ 19 ಸಾಂಕ್ರಾಮಿಕ ಹರಡಿದ್ದ ಕಾರಣ 2021 ಜೂನ್ಗೆ ಮುಂದೂಡಲಾಗಿತ್ತು. ಆದರೆ, ಆತಿಥ್ಯ ವಹಿಸಿಕೊಳ್ಳಬೇಕಿದ್ದ ಶ್ರೀಲಂಕಾದಲ್ಲಿ ಕೊರೊನಾ ಏರಿಕೆಯಾಗಿದ್ದ ಕಾರಣ ಮತ್ತೊಮ್ಮೆ ಮುಂದೂಡಿಕೆ ಮಾಡಲಾಗಿತ್ತು.
ದುಬೈಯಲ್ಲಿ ಟೂರ್ನಿ ಆಯೋಜನೆ: ಆರ್ಥಿಕ ಬಿಕ್ಕಟ್ಟಿನಿಂದ ಟೂರ್ನಿ ಆಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಟೂರ್ನಿ ದುಬೈನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ.