ಅಬುಧಾಬಿ: ವನಿಂಡು ಹಸರಂಗ ಅವರ ಆಲ್ರೌಂಡರ್ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ಸತತ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಟಿ-20 ವಿಶ್ವಕಪ್ನಲ್ಲಿ ಸೂಪರ್ 12 ಪ್ರವೇಶಿಸಿದೆ.
ಬುಧವಾರ ನಡೆದ ಐರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 7 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತ್ತು. ಆರಂಭಿಕ ಪತುಮ್ ನಿಸಾಂಕ 61 ಮತ್ತು ವನಿಂಡು ಹಸರಂಗ 71 ರನ್ ರನ್ಗಳಿಸಿದ್ದರು. ಐರ್ಲೆಂಡ್ ಪರ ಜೋಶುವಾ ಲಿಟಲ್ 23ಕ್ಕೆ 4 ವಿಕೆಟ್ ಪಡೆದರೆ, ಮಾರ್ಕ್ ಅದೈರ್ 35ಕ್ಕೆ 2 ವಿಕೆಟ್ ಪಡೆದರು.
172 ರನ್ಗಳ ಗುರಿ ಬೆನ್ನಟ್ಟಿದ ಐರ್ಲೆಂಡ್ 18.3 ಓವರ್ಗಳಲ್ಲಿ 101ಕ್ಕೆ ಆಲೌಟ್ ಆಗುವ ಮೂಲಕ 70 ರನ್ಗಳ ಸೋಲು ಕಂಡಿತು. ನಾಯಕ ಆ್ಯಂಡ್ರ್ಯೂ ಬಾಲ್ಬಿರ್ನಿ 41 ರನ್ ಮತ್ತು ಕರ್ಟಿಸ್ ಕ್ಯಾಂಫರ್ 24 ರನ್ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ಗಳು ಎರಡಂಕಿ ಮೊತ್ತ ದಾಖಲಿಸುವಲ್ಲಿ ವಿಫಲರಾದರು.
ಶ್ರೀಲಂಕಾ ಪರ ಮಹೇಶ್ ತೀಕ್ಷಾನ 17ಕ್ಕೆ 3, ಲಹಿರು ಕುಮಾರ 22ಕ್ಕೆ2, ವನಿಂಡು ಹಸರಂಗ 12ಕ್ಕೆ1, ಕರುಣರತ್ನೆ 27ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಶ್ರೀಲಂಕಾ ಇನ್ನು ಒಂದು ಕ್ವಾಲಿಫೈಯರ್ ಪಂದ್ಯ ಇರುವಂತೆಯೇ ಸೂಪರ್ 12ಗೆ ಅರ್ಹತೆ ಪಡೆದುಕೊಂಡಿತು. ಇದೀಗ ಎರಡನೇ ತಂಡಕ್ಕಾಗಿ ಐರ್ಲೆಂಡ್ ಮತ್ತು ನಮೀಬಿಯಾ ತಂಡಗಳು ಶುಕ್ರವಾರ ನಡೆಯುವ ಪಂದ್ಯದಲ್ಲಿ ಕಾದಾಡಲಿವೆ.
ಇದನ್ನು ಓದಿ:ಟಿ-20 ವಿಶ್ವಕಪ್ ಇತಿಹಾಸದಲ್ಲಿ ಚೊಚ್ಚಲ ಜಯ ಸಾಧಿಸಿದ ನಮೀಬಿಯಾ