ಪರ್ಲ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ವಿರುದ್ಧದ ಏಕದಿನ ಸರಣಿ ಸಮಬಲವಾಗಿದೆ. ಗುರುವಾರ ನಡೆಯಲಿರುವ ಮೂರನೇ ಪಂದ್ಯವು ಪ್ರಶಸ್ತಿ ಗೆಲುವಿಗೆ ಪ್ರಮುಖ ಹಣಾಹಣಿಯಾಗಿದೆ. 2018ರ ನಂತರ ಹರಿಣಗಳ ನಾಡಿನಲ್ಲಿ ಸರಣಿ ಗೆಲ್ಲಲು ಮತ್ತು 2022ರ ಕ್ಲೀನ್ ಸ್ವೀಪ್ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ ರಾಹುಲ್ ಪಡೆ.
ಮೂರನೇ ಪಂದ್ಯದಲ್ಲಿ ಯಶಸ್ಸು ಸಾಧಿಸಲು ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯುವುದು ಅಗತ್ಯ. ಮೊದಲ ಪಂದ್ಯದಲ್ಲಿ ಭಾರತ ಜಯ ದಾಖಲಿಸಿತಾದರೂ ಉತ್ತಮ ಆರಂಭ ಬರಲಿಲ್ಲ. ಎರಡನೇ ಪಂದ್ಯದಲ್ಲೂ ಅದೇ ಮರುಕಳಿಸಿತು. ಮೊದಲ ವಿಕೆಟ್ಗೆ ದೊಡ್ಡ ಜೊತೆಯಾಟ ಮೂಡಿಬರದ ಕಾರಣ ಬೃಹತ್ ಮೊತ್ತ ಕಲೆಹಾಕುವಲ್ಲಿ ತಂಡ ಎಡವುತ್ತಿದೆ.
ಗಾಯಕ್ವಾಡ್ ವೈಫಲ್ಯ: ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ರನ್ ಗಳಿಸಲು ಪರದಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 5 ರನ್ಗೆ ವಿಕೆಟ್ ಕೊಟ್ಟರೆ, ಎರಡನೇ ಪಂದ್ಯದಲ್ಲಿ 4 ರನ್ಗೆ ಔಟ್ ಆದರು. ಮೊದಲ ಪಂದ್ಯದಲ್ಲಿ ಭಾರತ 23 ರನ್ನ ಮೊದಲ ವಿಕೆಟ್ ಜೊತೆಯಾಟ ಪಡೆದರೆ, ಎರಡನೇ ಪಂದ್ಯದಲ್ಲಿ 4 ರನ್ ಜೊತೆಯಾಟ ಮಾತ್ರ ಕಂಡಿತು. ಗಾಯಕ್ವಾಡ್ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಕಾಡುತ್ತಿದೆ.
ಪಾಟಿದಾರ್ ಪಾದಾರ್ಪಣೆ?: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ದಕ್ಷಿಣ ಆಫ್ರಿಕಾದಲ್ಲಿ ಸಹ ಕ್ಲಿಕ್ ಆಗಿಲ್ಲ. ಹೀಗಾಗಿ ಗಾಯಕ್ವಾಡ್ ಮತ್ತು ತಿಲಕ್ ವರ್ಮಾಗೆ ನಾಳಿನ ಪಂದ್ಯಕ್ಕೆ ಕೊಕ್ ಸಿಗಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ತಂಡಕ್ಕೆ ಈ ಹಿಂದೆ ಆಯ್ಕೆಯಾದರೂ ಪಾದಾರ್ಪಣೆ ಅವಕಾಶದಿಂದ ವಂಚಿತರಾಗಿದ್ದ ರಜತ್ ಪಾಟಿದಾರ್ ನಾಳಿನ ಪಂದ್ಯದಲ್ಲಿ ಚೊಚ್ಚಲ ಕರೆ ಪಡೆಯುವ ಸಾಧ್ಯತೆ ಇದೆ. ಆದರೆ ಪಾಟಿದಾರ್ ದೇಶೀಯ ಕ್ರಿಕೆಟ್ನಲ್ಲಿ 4ನೇ ಸ್ಥಾನದಲ್ಲಿ ಆಡುತ್ತಾರೆ. ಹೀಗಾಗಿ ಅವರ ಅವಕಾಶ ಗೊಂದಲಕ್ಕೆ ಕಾರಣವಾಗಿದೆ. ಶ್ರೇಯಸ್ ಅಯ್ಯರ್ ಮೊದಲ ಏಕದಿನದ ನಂತರ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಅಭ್ಯಾಸದಲ್ಲಿ ತೊಡಗಿದ್ದಾರೆ. ತಂಡದಲ್ಲಿ ಬೇರೆ ಆಯ್ಕೆಗಳಿಲ್ಲದಿರುವುದರಿಂದ ನಾಯಕ ರಾಹುಲ್ ಪಾಟಿದಾರ್ಗೆ ಒಂದು ಅವಕಾಶ ನೀಡುವ ಸಾಧ್ಯತೆ ಇದೆ.
ಸಂಜು ಸ್ಥಾನ ಅಸ್ತಿರ: ಸಂಜು ಸ್ಯಾಮ್ಸನ್ಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಸಿಗಲೇ ಇಲ್ಲ. ಎರಡನೇ ಪಂದ್ಯದಲ್ಲಿ ತಂಡಕ್ಕೆ ಅಗತ್ಯ ಇದ್ದಾಗ 23 ಬಾಲ್ ಆಡಿ ಕೇವಲ 12 ರನ್ ಗಳಿಸಿ ವಿಕೆಟ್ ಕೊಟ್ಟರು. ಈಗ ಮೂರನೇ ಪಂದ್ಯದಲ್ಲಿ ಅವರ ಸ್ಥಾನ ಅಸ್ಥಿರವಾಗಿದೆ. ಎರಡನೇ ಏಕದಿನದಲ್ಲಿ ಅವರಿಗೆ ರಾಹುಲ್ ಕೀಪರ್ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಮೂರನೇ ಏಕದಿನದಲ್ಲೂ ಸಂಜು ಕೀಪರ್ ಆಗಿ ಮುಂದುವರೆದರೆ ಅವಕಾಶ ಇರಲಿದೆ.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆ: ಮೊದಲ ಏಕದಿನ ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ಮತ್ತು ಅವೇಶ್ ಖಾನ್ ಬೌಲಿಂಗ್ನಲ್ಲಿ ಮಿಂಚಿದರು. ಎರಡನೇ ಪಂದ್ಯದಲ್ಲಿ ಸಿಂಗ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಮುಖೇಶ್ ಕುಮಾರ್ ತಮ್ಮ ಮೇಲಿನ ಭರವಸೆಯಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ಎರಡೂ ಪಂದ್ಯದಲ್ಲಿ ವಿಕೆಟ್ ಕಬಳಿಸಲಿಲ್ಲ. ಹೀಗಾಗಿ ಅವರಿಗೆ ಕೊಕ್ ನೀಡಿ ಆಕಾಶ್ ದೀಪ್ ಆಡಿಸುವ ಸಾಧ್ಯತೆ ಇದೆ.
ಚಹಾಲ್ಗೆ ಇದೆಯಾ ಸ್ಥಾನ?: ವೆಸ್ಟ್ ಇಂಡೀಸ್ ಪ್ರವಾಸದ ನಂತರ ತಂಡದಿಂದ ದೂರ ಉಳಿದಿರುವ ಯುಜ್ವೇಂದ್ರ ಚಹಾಲ್ ತಂಡದಲ್ಲಿ ಆಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಎರಡೂ ಪಂದ್ಯದಲ್ಲಿ ಸ್ಪಿನ್ ಬೌಲರ್ಗಳು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಕುಲ್ದೀಪ್ ಯಾದವ್ ಅವರನ್ನು ಕೈಬಿಟ್ಟು ಚಹಾಲ್ಗೆ ಜಾಗಮಾಡಿಕೊಡುವ ನಿರೀಕ್ಷೆಯೂ ಇದೆ. ಅಕ್ಷರ್ ಬ್ಯಾಟಿಂಗ್ನಿಂದ ತಂಡಕ್ಕೆ ನೆರವಾಗುತ್ತಾರೆ ಎಂಬ ನಿರೀಕ್ಷೆ ಇನ್ನೊಂದು ಅವಕಾಶಕ್ಕೆ ಕಾರಣ ಆಗಬಹುದು.
ಪುಟಿದೆದ್ದ ಹರಿಣಗಳು: ಮೊದಲ ಏಕದಿನದಲ್ಲಿ ಕಳಪೆ ಬ್ಯಾಟಿಂಗ್ನಿಂದ ಅವಮಾನಕ್ಕೆ ಒಳಗಾದ ದಕ್ಷಿಣ ಆಫ್ರಿಕಾ ತಂಡ ಎರಡನೇ ಪಂದ್ಯದಲ್ಲಿ ಸುದಾರಿಸಿಕೊಂಡಿತು. ಕ್ವಿಂಟನ್ ಡಿ ಕಾಕ್ ನಿವೃತ್ತಿಯ ನಂತರ ಟೋನಿ ಡಿ ಜೊರ್ಜಿ ಅವರ ಶತಕ ತಂಡಕ್ಕೆ ಭರವಸೆ ತಂದಿದೆ. ರೀಜಾ ಹೆಂಡ್ರಿಕ್ಸ್ ಅರ್ಧಶತಕವೂ ತಂಡಕ್ಕೆ ಇನ್ನೊಂದು ಗೆಲುವಿನ ಪುಷ್ಟಿ ನೀಡಿದೆ. ಮೂರನೇ ಪಂದ್ಯದಲ್ಲಿ ಉಭಯ ತಂಡಗಳು ಸರಣಿ ಗೆಲುವಿಗಾಗಿ ಕಠಿಣ ಪೈಪೋಟಿ ನಡೆಸಲಿದೆ.
ತಂಡಗಳು- ಭಾರತ: ರುತುರಾಜ್ ಗಾಯಕ್ವಾಡ್/ ರಜತ್ ಪಾಟಿದಾರ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ಕೆ.ಎಲ್.ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್/ ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್/ ಆಕಾಶ್ ದೀಪ್, ಅವೇಶ್ ಖಾನ್, ಅರ್ಶದೀಪ್ ಸಿಂಗ್,
ದಕ್ಷಿಣ ಆಫ್ರಿಕಾ: ಟೋನಿ ಡಿ ಝೋರ್ಜಿ, ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ಬ್ಯೂರಾನ್ ಹೆಂಡ್ರಿಕ್ಸ್
ಇದನ್ನೂ ಓದಿ: ಕೆಕೆಆರ್ ತಂಡಕ್ಕೆ ಸ್ಟಾರ್ಕ್ ಬೌಲಿಂಗ್ ಬಲ: ಮೆಂಟರ್ ಗಂಭೀರ್ ಹೇಳಿದ್ದೇನು?