ಹೈದರಾಬಾದ್: ಏಕದಿನ ವಿಶ್ವಕಪ್ (World Cup) ಸರಣಿಯ 23ನೇ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಬಾಂಗ್ಲಾದೇಶಕ್ಕೆ ಬೌಲಿಂಗ್ಗೆ ಆಹ್ವಾನಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧದ ಹಿಂದಿನ ಪಂದ್ಯದಲ್ಲಿ 229 ರನ್‌ಗಳ ದೊಡ್ಡ ಮೊತ್ತದ ಗೆಲುವು ದಾಖಲಿಸಿರುವ ಹರಿಣಗಳು ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರಲ್ಲಿ ಜಯಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ 4 ಪಂದ್ಯಗಳನ್ನಾಡಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿರುವ ಬಾಂಗ್ಲಾ 7ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಬಾಂಗ್ಲಾಗೆ ಕಠಿಣ ಸವಾಲಾಗಲಿದೆ.
ಟೆಂಬಾ ಬಾವುಮಾ ಅಲಭ್ಯ: ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬಾವುಮಾ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದು ಅವರ ಅನುಪುಸ್ಥಿತಿಯಲ್ಲಿ ತಂಡವನ್ನು ಐಡೆನ್ ಮಾರ್ಕ್ರಾಮ್ ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ದದ ಕೊನೆಯ ಪಂದ್ಯವನ್ನು ಬಾವುಮಾ ಆಡಿರಲಿಲ್ಲ. ಅವರ ಬದಲಿಗೆ ರೀಜಾ ಹೆಂಡ್ರಿಕ್ಸ್ ಪಂದ್ಯವನ್ನಾಡಿದ್ದರು.
ಶಕೀಬ್ ಅಲ್ ಹಸನ್ ಪುನರಾಗಮನ : ಭುಜದ ಗಾಯದಿಂದ ಭಾರತ ವಿರುದ್ದದ ಪಂದ್ಯದಿಂದ ಹೊರಗುಳಿದಿದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಇಂದಿನ ಪಂದ್ಯಕ್ಕೆ ಪುನರಾಗಮನ ಮಾಡಿದ್ದಾರೆ.
ಪಿಚ್ ವರದಿ: ವಾಂಖೆಡೆ ಬ್ಯಾಟಿಂಗ್ ಪಿಚ್ ಆಗಿದೆ. ಚೇಸಿಂಗ್ ಕೂಡ ಈ ಪಿಚ್ನಲ್ಲಿ ಸುಲಭವಾಗಿರಲಿದೆ. ಆದರೇ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ಗೆ 400 ರನ್‌ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಆಂಗ್ಲರ ತಂಡ ಕೇವಲ 170 ರನ್ಗಳಿಸಲಷ್ಟೇ ಶಕ್ತವಾಗಿತ್ತು.
ವಾಂಖೆಡೆ ಅಂಕಿ- ಅಂಶ: ವಾಂಖೆಡೆ ಅಂಕಿ - ಅಂಶಗಳನ್ನು ಏಕದಿನ ಮಾದರಿಯಲ್ಲಿ ನೋಡಿದರೆ ಈ ವರೆಗೂ ಇಲ್ಲಿ ಒಟ್ಟು 24 ಪಂದ್ಯಗಳು ನಡೆದಿವೆ. ಈ ಪೈಕಿ ಮೊದಲು ಮತ್ತು ಎರಡನೇ ಬ್ಯಾಟ್ ಮಾಡಿರುವ ತಂಡಗಳು ತಲಾ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ವಾಂಖೆಡೆಯ ಗರಿಷ್ಟ ಸ್ಕೋರ್ 438 ಆಗಿದ್ದರೆ, 115 ಕನಿಷ್ಠ ಸ್ಕೋರ್ ಆಗಿದೆ.
ಹವಮಾನ ವರದಿ: ಮುಂಬೈನಲ್ಲಿ ಇಂದು ಗರಿಷ್ಠ ತಾಪಮಾನ 35 ಡಿಗ್ರಿ ಇರಲಿದ್ದು ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೆಡ್ ಟೂ ಹೆಡ್: ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಈ ವರೆಗೂ ಒಟ್ಟು 24 ಏಕದಿನ ಪಂದ್ಯಗಳನ್ನು ಆಡಿವೆ. ಇದರಲ್ಲಿ ಹರಿಣಗಳು 18 ಬಾರಿ ಗೆಲುವು ದಾಖಲಿಸಿದರೆ, ಬಾಂಗ್ಲಾ 6 ಬಾರಿ ಮಾತ್ರ ಗೆಲುವು ಕಂಡಿದೆ. ವಿಶ್ವಕಪ್ನಲ್ಲಿ ಉಭಯ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಗೆಲವು ಕಂಡು ಸಮಬಲ ಸಾಧಿಸಿವೆ.
ತಂಡಗಳು ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ವಿ.ಕೀ ), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್
ಬಾಂಗ್ಲಾದೇಶ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೋ, ಶಕೀಬ್ ಅಲ್ ಹಸನ್(ನಾಯಕ), ಮೆಹಿದಿ ಹಸನ್ ಮಿರಾಜ್, ಮುಶ್ಫಿಕರ್ ರಹೀಮ್(ವಿ.ಕೀ), ಮಹ್ಮುದುಲ್ಲಾ, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಗಾಯಗೊಂಡು ಇಂಗ್ಲೆಂಡ್ ತಂಡದಿಂದ ಹೊರಬಿದ್ದ ಟೋಪ್ಲಿ, ಕಾರ್ಸೆಗೆ ಸ್ಥಾನ