ಹೈದರಾಬಾದ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ವಿನೂತನ ದಾಖಲೆ ಬರೆದಿದ್ದಾರೆ. ಪುರುಷರ ಆರಂಭಿಕ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ನಂತರದಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿರುವ ಏಕೈಕ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಆಗಿರುವ ಮಂಧಾನ ಇಲ್ಲಿಯವರೆಗೆ 79 ಇನ್ನಿಂಗ್ಸ್ ಆಡಿದ್ದು, 27.45ರ ಸರಾಸರಿಯಲ್ಲಿ 2,004 ರನ್ಗಳಿಕೆ ಮಾಡಿದ್ದಾರೆ. ಇದರಲ್ಲಿ 14 ಅರ್ಧಶತಕಗಳು ಸೇರಿವೆ. ಅತ್ಯುತ್ತಮ ಸ್ಕೋರ್ 86 ಆಗಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ ನಂತರ ಟಿ20 ಕ್ರಿಕೆಟ್‌ನಲ್ಲಿ 2 ಸಾವಿರ ರನ್ ಪೂರೈಸಿರುವ ಭಾರತದ ಎರಡನೇ ಆರಂಭಿಕ ಆಟಗಾರ್ತಿ ಎಂಬ ಶ್ರೇಯ ಸ್ಮೃತಿ ಮಂಧಾನ ಅವರದ್ದಾಗಿದೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾರ್ಬಡೋಸ್ ವಿರುದ್ಧದ ಪಂದ್ಯದಲ್ಲಿ ಮಂಧಾನ ಈ ಸಾಧನೆ ತೋರಿದರು.
ಇದನ್ನೂ ಓದಿ: ಇಂಗ್ಲೆಂಡ್ U-19 ತಂಡದಲ್ಲಿ ಭಾರತೀಯ ಪ್ರತಿಭೆ: ಈತ ಟೀಂ ಇಂಡಿಯಾ ಮಾಜಿ ವೇಗಿಯ ಪುತ್ರ!
ರೋಹಿತ್ ಶರ್ಮಾ 96 ಇನ್ನಿಂಗ್ಸ್ಗಳಲ್ಲಿ 33.03 ಸರಾಸರಿಯಲ್ಲಿ 2,973 ರನ್ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ 22 ಅರ್ಧಶತಕ ಸೇರಿವೆ. 118 ರನ್ ಇವರ ಅತ್ಯುತ್ತಮ ಸ್ಕೋರ್ ಆಗಿದೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಂಧಾನ ಮೂರು ಇನ್ನಿಂಗ್ಸ್ಗಳಿಂದ 46.00 ಸರಾಸರಿಯಲ್ಲಿ 92ರನ್ಗಳಿಕೆ ಮಾಡಿದ್ದಾರೆ. ಇದರಲ್ಲಿ ಪಾಕ್ ವಿರುದ್ಧ ಅಜೇಯ 63 ರನ್ ಕಲೆ ಹಾಕಿದ್ದಾರೆ.