ಕೊಲೊಂಬೊ: ಮಹೇಲಾ ಜಯವರ್ಧನೆ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಸಲಹೆಗಾರನಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸೋಮವಾರ ನೇಮಕ ಮಾಡಿದೆ. ಎಸ್ಎಲ್ಸಿಯ ಎಕ್ಸಿಕ್ಯೂಟಿವ್ ಸಮಿತಿಯು ತಾಂತ್ರಿಕ ಸಲಹಾ ಸಮಿತಿಯೊಡನೆ ಚರ್ಚೆ ಮಾಡಿ ಶ್ರೀಲಂಕಾ ತಂಡದ ಮಾಜಿ ನಾಯಕ ಜಯವರ್ಧನೆ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದೆ.
ಮುಂಬೈ ಇಂಡಿಯನ್ಸ್ ಕೋಚ್ ಜಯವರ್ಧನೆ ಈ ಹುದ್ದೆಯಲ್ಲಿ ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲಿದ್ದು, ರಾಷ್ಟ್ರೀಯ ತಂಡಗಳ ಒಟ್ಟಾರೆ ಕ್ರಿಕೆಟ್ ವಿಷಯಗಳ ಉಸ್ತುವಾರಿ ವಹಿಸುತ್ತಾರೆ ಮತ್ತು ಹೈ- ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಆಟಗಾರರು ಮತ್ತು ಮ್ಯಾನೇಜ್‌ಮೆಂಟ್ ತಂಡಗಳಿಗೆ ಕಾರ್ಯತಂತ್ರಗಳ ವಿಚಾರದಲ್ಲಿ ಬೆಂಬಲವನ್ನು ನೀಡಲಿದ್ದಾರೆ ಎಂದು ಬೋರ್ಡ್ ತಿಳಿಸಿದೆ.
ಮಹೇಲಾ ರಾಷ್ಟ್ರೀಯ ತಂಡದ ಈ ಸ್ಥಾನ ಅಲಂಕರಿಸುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ. ಅದರಲ್ಲೂ ಶ್ರೀಲಂಕಾ 2022 ರಲ್ಲಿ ಅಂತಾರಾಷ್ಟ್ರೀಯ ವೇಳಾಪಟ್ಟಿ ಹೊಂದಿರುವ ಸಮಯದಲ್ಲಿ ಅವರು ಬೋರ್ಡ್ ಜೊತೆ ಕೈಜೋಡಿಸಿದ್ದಾರೆ. ಇತ್ತೀಚೆಗೆ ಮುಗಿದ ಐಸಿಸಿ ಪುರುಷರ ಟಿ-20 ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ ತಂಡದ ಒಟ್ಟಾರೆ ಪ್ರದರ್ಶನಕ್ಕೆ ಅವರ ಕೊಡುಗೆ ಕೂಡ ಅಮೂಲ್ಯವಾಗಿತ್ತು ಎಂದು ಎಸ್ಎಲ್ಸಿ ಸಿಎಒ ಆ್ಯಶ್ಲೆ ಡಿ ಸಿಲ್ವಾ ಹೇಳಿದ್ದಾರೆ.
ಈ ಹೊಸ ಹುದ್ದೆಯ ಹೊರತಾಗಿಯೂ ಜಯವರ್ಧನೆ ಮುಂದಿನ ವರ್ಷ ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಅಂಡರ್ 19 ವಿಶ್ವಕಪ್ ತಯಾರಿಯ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಅಮೋಘ ಫಾರ್ಮ್ನಲ್ಲಿರುವ ಈತನನ್ನ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಮಾಡಿ: ವೆಂಗ್ಸರ್ಕಾರ್